ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬಜೆಟ್ ಮಂಡಿಸುತ್ತಿದ್ದು, ಮಹಿಳೆಯರ ಅನೂಕೂಲಕ್ಕೆ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ , ಉಡುಪಿಯಲ್ಲಿ ಯಕ್ಷ ರಂಗಾಯಣ ಸ್ಥಾಪನೆ, ಪೊಲೀಸ್ ಸಿಬ್ಬಂದಿ ವಾಹನ ಖರೀದಿಗೆ 50 ಕೋಟಿ, ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ ವಹಿಸಲಾಗುವುದು ಎಂದು ಬೊಮ್ಮಾಯಿ ಘೋಷಿಸಿದ್ದಾರೆ.
ಜೊತೆಗೆ ರಾಜ್ಯದ ಎಲ್ಲ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಘೋಷಿಸಿದರು.
ರಾಜ್ಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ ಏರಿಕೆ ಮಾಡಲಾಗಿದೆ. ಈ ಹಿಂದೆ ಇದ್ದ ಅಂಗನವಾಡಿ ಕಾರ್ಯಕರ್ತರಿಗೆ ಇದ್ದ ಗೌರವಧನವನ್ನು 1 ಸಾವಿರ ರೂ.ಗಳಿಂದ 1,500 ರೂ. ಹೆಚ್ಚಳ ಮಾಡಲಾಗಿದೆ. ಸಹಾಯಧನ ಏರಿಕೆಯಿಂದ ಭಾರಿ ಅನುಕೂಲ ಆಗಿದೆ. ರಾಜ್ಯದಲ್ಲಿ ಮಹಿಳಾ ಸಬಲೀಕರಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿವೆ. ಇದರಿಂದ ಸಮರ್ಪಕವಾಗಿ ಅಭಿವೃದ್ಧಿ ಮಾಡಲು ಅನುಕೂಲ ಆಗುತ್ತದೆ.
ಮಕ್ಕಳಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ಮತ್ತು ಅದಕ್ಕೆ ಪ್ರತ್ಯೇಕವಾಗಿ ಅನುದಾನ ಮೀಸಲಿಡಲು ಅನುಕೂಲ ಆಗಲಿದೆ ಎಂದು ಸರ್ಕಾರ ನಿರ್ಧರಿಸಿದೆ. ಆಸಿಡ್ ದಾಳಿಗೆ ಒಳಗಾದವರಿಗೆ ಇನ್ನು ಮುಂದೆ 3 ಸಾವಿರ ರೂ. ಗಳಿಂದ ಬರೋಬ್ಬರಿ 10 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ರೈತ ಮಹಿಳೆಯರಲ್ಲಿ ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು 3.33 ಲಕ್ಷ ಕೋಳಿಮರಿಗಳನ್ನು ವಿತರಿಸಲಾಗಿದೆ.