ಬೆಳಗಾವಿ : ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಆದರೂ ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ನಲ್ಲಿ ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧ ಸರಿಯಿದೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಬಂಧ ಹಾಳಾಗಿದೆ ಎಂದರು. ನಾನು ಏಕಾಂಗಿಯಲ್ಲ, ಎಲ್ಲಾ ಧರ್ಮದವರು, ಜಾತಿಯವರು ನನ್ನ ಜೊತೆ ಇದ್ದಾರೆ ಎಂದು ಹೇಳಿದರು.
ಬಾದಾಮಿ ಕ್ಷೇತ್ರದಿಂದ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಬಾದಾಮಿಯಲ್ಲೇ ಸ್ಪರ್ಧಿಸುವಂತೆ ಆಗ್ರಹಿಸಿ ಸಾವಿರಾರು ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡುತ್ತೇವೆ ಎಂದು ಒತ್ತಡ ಹಾಕಿ ಪತ್ರ ಬರೆದಿದ್ದಾರೆ, ಆದರೆ ನನ್ನ ಮನಸು ಒಪ್ಪುತ್ತಿಲ್ಲ, ಬಾದಾಮಿಗೆ ಹೋಗಿ 2 ತಿಂಗಳಾಗಿದೆ. ವಾರಕ್ಕೊಮ್ಮೆಯೂ ಅಲ್ಲಿ ಇರಲಾಗುತ್ತಿಲ್ಲ.ಕಾರ್ಯಕರ್ತರಿಗೆ, ಜನರಿಗೆ ಸಿಗಲಾಗುತ್ತಿಲ್ಲ, ಕಷ್ಟಕ್ಕೆ ಸ್ಪಂದಿಸಲಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು.
ಬಿಜೆಪಿಯವರಿಗೆ ಬುದ್ಧಿ ಇಲ್ಲ. ನನಗೆ ಕ್ಷೇತ್ರ ಇಲ್ಲವೆಂದು ಹೇಳುತ್ತಿದ್ದಾರೆ. ಕ್ಷೇತ್ರ ಇಲ್ಲದಿದ್ದರೆ ಇಷ್ಟೊಂದು ಜನ ಆಹ್ವಾನ ನೀಡುತ್ತಾರೆಯೇ?ಎಂದರು.