ಹಾಸನ: ನಮ್ಮ ಲಿಂಗೇಶಣ್ಣ ಬಹಳ ಬುದ್ದಿವಂತ ಇದ್ದಾನೆ. ನಾಟಕದಲ್ಲಿ ಹೆಂಗೆಂಗೆ ಪಾತ್ರ ಇರುತ್ತೆ, ಹಂಗಂಗೆ ಡೈಲಾಗ್ ಇರುತ್ವೆ. ಅದು ಹೇಗೆ ಮಾಡಿದರೂ ಜನರ ಹಿತದೃಷ್ಟಿ ಇರುತ್ತೆ. ಹೀಗಾಗಿ ನಾವು ಯಾವತ್ತಿದ್ದರೂ ಅವನ ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡ್ತೇವೆ ಎಂದು ಜೆಡಿಎಸ್ ಶಾಸಕ ಲಿಂಗೇಶ್ ರನ್ನು ನಗುನಗುತ್ತಲೇ ಸಿಎಂ ಬೊಮ್ಮಾಯಿ ಕಾಲೆಳೆದರು.
ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬಹಳ ಬೆರಿಕಿ ಇದಿಯಾ ನೀ’ ಬೇಲೂರು ರಾಜಕಾರಣ ನನಗೆ ಸಂಪೂರ್ಣ ಗೊತ್ತಿದೆ’ ಎಂದು ತಿಳಿಸಿದರು.
ರಣಘಟ್ಟ ನೀರಾವರಿ ಯೋಜನೆಗಾಗಿ ಪುಷ್ಪಗಿರಿ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದರು. ರೈತರು, ಸ್ವಾಮೀಜಿಗಳು, ರಾಜಕೀಯ ಪಕ್ಷಗಳ ನಾಯಕರು ಹೋರಾಟ ಮಾಡಿದ್ದರು. ಈ ಹೋರಾಟದಲ್ಲಿ ಲಿಂಗೇಶ್ ನೀನು ಇದ್ಯಾ? ಆಗಿನ್ನೂ ನೀನು ಎಂಎಲ್ಎ ಆಗಿರಲಿಲ್ಲ. ಗೊತ್ತಿದೆ ನನಗೆ, ಆ ಹೋರಾಟವೇ ನಿನ್ನ ಎಂಎಲ್ಎ ಮಾಡೋಕೆ ಕಾರಣವಾಯಿತು’ ಎಂದು ಹೇಳಿದರು.
ಲಿಂಗೇಶ್ ಆಗ ಅವರಿಗೂ ಸನ್ಮಾನ ಮಾಡಿದ, ನನಗೂ ಸನ್ಮಾನ ಮಾಡಿದ’ ಎಂದ ಅವರ ನಾಟಕೀಯವಾಗಿ ಲಿಂಗೇಶ್ ಅವರ ಕಡೆಗೆ ನೋಡಿದರು. ‘ಅದೆಲ್ಲಾ ಮಾಡ್ತಿಯಾ ನೀನು’ ಎಂದರು. ಮಧ್ಯ ಪ್ರವೇಶಿಸಿ ಮಾತನಾಡಿದ ಲಿಂಗೇಶ್, ‘ನಾನು ನಿಮಗೂ ಸನ್ಮಾನ ಮಾಡಿದ್ದೆ’ ಎಂದರು.
‘ಹೌದು, ನನಗೂ ನೀ ಸನ್ಮಾನ ಮಾಡಿದ್ದಿಯಾ ಅಂತ ಹೇಳಿದ್ನಲ್ಲ. ಎಂದು ತಮ್ಮದೇ ದಾಟಿಯಲ್ಲಿ ಕುಟುಕಿದರು. ಸಿಎಂ ಮಾತಿನಿಂದ ಗಲಿಬಿಲಿಯಾದ ಲಿಂಗೇಶ್, ‘ಅದು ನಿಯತ್ತು ಅಣ್ಣ’ ಎಂದರು. ‘ನಿಯತ್ತು ಯಾವುದು, ಬೆರಿಕಿ ಯಾವುದು ಅನ್ನೋ ವ್ಯತ್ಯಾಸ ನನಗೆ ಗೊತ್ತಿದೆ’ ಎಂದು ಮತ್ತೊಮ್ಮೆ ಸಿಎಂ ಶಾಸಕನ ಕಾಲೆಳೆದರು.