ದೊಡ್ಡಬಳ್ಳಾಪುರ: ರಾಜ್ಯದ ಜನರ ಮುಂದೆ ಬಿಜೆಪಿಯ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದೇವೆ, ಇದಕ್ಕೆ ಬಿಜೆಪಿ ಸರಕಾರದ ಪಾಪದ ಪುರಾಣ ಎಂದು ಹೆಸರಿಟ್ಟಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರಿಗೆ ಸತ್ಯ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ , ಭೂತದ ಬಾಯಲ್ಲಿ ಮಂತ್ರ ಹೇಳಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಶಕ್ತಿ ಇಲ್ಲ. ಜೆಡಿಎಸ್ ನವರು ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಬಾಲ, ಬಿಜೆಪಿ ಬಂದರೆ ಬಿಜೆಪಿ ಬಾಲ ಹಿಡಿಯುತ್ತಾರೆ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. 2 ವರ್ಷ 10 ತಿಂಗಳು ಮುಖ್ಯಮಂತ್ರಿ ಆಗಿದ್ದೀರಿ. ಆಗ ಪಂಚರತ್ನ ನೆನಪಗಲಿಲ್ಲವೆ. ಎಲೆಕ್ಷನ್ ಬಂದಾಗ ಮಾತ್ರ ಪಂಚರತ್ನ ನೆನಪಾಯ್ತಾ? ಎಂದು ಪ್ರಶ್ನಿಸಿದರು.
ನಾನು 5 ವರ್ಷ ಸಿಎಂ ಆಗಿದ್ದಾಗ ಬಿಜೆಪಿ ಅಧಿಕೃತ ವಿರೋಧ ಪಕ್ಷದಲ್ಲಿ ಇದ್ದರು. ಆಗ ಒಂದು ದಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಆಗ ಏನು ಬಾಯಲ್ಲಿ ಕಲ್ಲು ಸಿಕ್ಕಿಕೊಂಡಿತ್ತಾ? ಯಾಕೆ ಆಗ ಪ್ರಶ್ನೆ ಮಾಡಲಿಲ್ಲ ಮಿಸ್ಟರ್ ಬಸವರಾಜು ಬೊಮ್ಮಾಯಿ? ಎಂದು ಪ್ರಶ್ನಿಸಿದರು.
ನಾನು ಸಿಎಂ ಆಗಿದ್ದಾಗ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ 1600 ಕೋಟಿ ಅನುದಾನ ನೀಡಿದ್ದೆ, ನಾವು ಅಧಿಕಾರಕ್ಕೆ ಬಂದರೆ ವಿದ್ಯುತ್ ಮತ್ತೆ 20 ಹೆಚ್ಪಿಗೆ ಏರಿಕೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.