ಕಲಬುರಗಿ: ಮಾಜಿ ಮುಖ್ಯಮಂತ್ರಿಗಳಿಗೆ ವಿರೋಧ ಪಕ್ಷದ ನಾಯಕರ ಸ್ಥಾನಮಾನ ಸಿಕ್ಕಿಲ್ಲ ಎಂದು ಹತಾಶರಾಗಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಿರಂತರವಾಗಿ ಸುದ್ದಿಯಲ್ಲಿದ್ದರೆ ಹೈಕಮಾಂಡ್ ಗಮನ ಸಳೆಯಬಹುದು ಎಂದು ಪೈಪೋಟಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ಎಲ್ಲಾದರೂ ಭ್ರಷ್ಟಾಚಾರ ಆಗಿದ್ದರೆ ಅದರ ದಾಖಲೆ ತೋರಿಸಲಿ. ಅವರು ಅಧಿಕಾರದಲ್ಲಿದ್ದಾಗ ನಾವು ದಾಖಲೆ ಸಮೇತ ಬಿಟ್ ಕಾಯಿನ್, ಪಿಎಸ್ಐ ಹಗರಣ ಬಗ್ಗೆ ಮಾತಾಡಿದ್ದೇವೆ ಆದರೂ ತನಿಖೆ ಮಾಡ್ಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ‘ಬಸವಾದಿ ಶರಣರು’ ಪ್ರೇರಣೆ : ಸಿಎಂ ಸಿದ್ದರಾಮಯ್ಯ
ಭ್ರಷ್ಟಾಚಾರ ಅಂತ ದಿನ ನಿತ್ಯ ಮಾತನಾಡುತ್ತಾರೆ ದಾಖಲೆ ಇದ್ದರೆ ತೋರಿಸಲಿ. ಪೆನ್ ಡ್ರೈವ್, ಪತ್ರ ಇದೆ ಅಂತ ಹೇಳ್ತಿರಲ್ಲ ತೋರಿಸಿ ತನಿಖೆ ಮಾಡೋಣ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಕೈ ವಿರುದ್ಧ ಕಮಲ ಕಿಡಿ
ಇದಕ್ಕೂ ಮೊದಲು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿತ್ತು. ಈ ವೇಳೆ ಮಾತನಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬರಗಾಲ ಬಂದಾಗ ರೈತರಿಗೆ ಕನಿಷ್ಠ ಸಹಾಯ ಮಾಡಿಲ್ಲ. 2 ಬಾರಿ ಬಿತ್ತನೆ ಮಾಡಿ ಬೀಜ ಗೊಬ್ಬರ ಹಾಕಿ ರೈತರು ಕಂಗಾಲಾಗಿದ್ದಾರೆ. ಸಾಲವೂ ಸಕಾಲದಲ್ಲಿ ಸಿಗುತ್ತಿಲ್ಲ ಎಂದರು. ನಾಲ್ಕು ದಿಕ್ಕಿನಲ್ಲಿ ಗಮನಿಸಿದರೂ ಸರ್ಕಾರ ವಿಫಲವಾಗಿದೆ. ಗೊಂದಲಗಳಲ್ಲಿ ಅದು ಸಿಲುಕಿ ಹಾಕಿಕೊಂಡಿದೆ. ಇದರ ಒಟ್ಟು ಪರಿಣಾಮವೆಂಬಂತೆ ಜನರಿಗೆ ಕೊಟ್ಟ ಮಾತಿಗೆ ಅದು ತಪ್ಪಿ ನಡೆದಿದೆ ಎಂದು ಆರೋಪಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.