ಯಾದಗಿರಿ: ಸಿಎಂ ಬೊಮ್ಮಾಯಿಯವರೇ ಹೇಳಿದಂತೆ ಮುಂದಿನ ಬಾರಿ ಅವರೇ ಸಿಎಂ ಆಗುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.
ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿ, ಬಸವರಾಜ ಬೊಮ್ಮಾಯಿ ಹೇಳಿರುವುದು ನೂರಕ್ಕೆ ನೂರು ಸತ್ಯ. ಬಿಜೆಪಿ ಸಂಪೂರ್ಣ ಬಹುಮತ ಬರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯುತ್ತವೆ, ಇದರಿಂದಾಗಿ ಬೊಮ್ಮಾಯಿ ಅವರೇ ಮತ್ತೊಮ್ಮೆ ಸಿಎಂ ಆಗುತ್ತಾರೆ ಎಂದು ಹೇಳಿದರು.
ಪ್ರಧಾನಿ ಮೋದಿಗೆ ನಿಂದನೆ ಆರೋಪದಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಕೊಟ್ಟಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಪ್ರಧಾನಿ ಆಗಬೇಕೆಂದು ಕನಸು ಕಂಡಿರುವ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಯಾವ ರೀತಿ ಮಾತಾಡಬೇಕು? ಹೇಗೆ ವರ್ತನೆ ಮಾಡಬೇಕು? ಎನ್ನುವುದನ್ನು ಈಗಲಾದರೂ ಕಲಿಬೇಕು ಎಂದು ಕಿಡಿಕಾರಿದರು.
ಇದೇ ವಿಚಾರವಾಗಿ, ನಾನು ಮತ್ತೆ ಸಿಎಂ ಆಗುತ್ತೇನೆಂದು ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ. ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂದು ಹೇಳಿರುವುದರಲ್ಲಿ ತಪ್ಪಿಲ್ಲ. ಸಿಎಂ ಬೊಮ್ಮಾಯಿ ಹೇಳಿಕೆ ಸ್ವಾಗತಿಸುತ್ತೇನೆ ಎಂದರು.