ಬೆಂಗಳೂರು: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಟೀಕೆಯು ಕೀಳು ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಕುರಿತಾದ ಕೀಳುಮಟ್ಟದ ಇಬ್ಬಗೆತನದ ಅವರ ಹೇಳಿಕೆಯು ಭಾರತಕ್ಕೆ ಮಾಡಿದ ಅವಮಾನ. ದೇಶಪ್ರೇಮಿ ಭಾರತೀಯರು ಇದನ್ನು ಖಂಡಿಸಿ ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಅವರ ಹೇಳಿಕೆಯು ಪಾಕಿಸ್ತಾನ ಸರ್ಕಾರದ ನೀಚ ಮನೋಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಡೀ ವಿಶ್ವದಲ್ಲಿಯೇ ಶಾಂತಿ ನೆಲೆಸುವಂತಾಗಲು ಭಾರತದ ಪ್ರಧಾನಿಯವರು ನೇತೃತ್ವ ವಹಿಸಬೇಕೆಂದು ವಿಶ್ವದ ಎಲ್ಲಾ ಪ್ರಮುಖ ದೇಶಗಳು ಕೋರುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರಿಂದ ಇಂತಹ ಹೇಳಿಕೆಯು ನಾಯಿ ಬಾಲ ಎಂದಿಗೂ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತುಪಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಲಾಡೆನ್ ಸತ್ತ, ಆದರೆ ಗುಜರಾತ್‌ನ ಕಟುಕು ಈಗಲೂ ಬದುಕಿದ್ದಾರೆ. ಆತ ಈಗ ಭಾರತದ ಪ್ರಧಾನಿಯಾಗಿದ್ದಾನೆ ಎಂದು ಬಿಲ್ವಾಲ್ ಭುಟ್ಟೋ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಅಷ್ಟೇ ಖಾರವಾಗಿ ಭಾರತ ತಿರುಗೇಟು ನೀಡಿದೆ.
ಪಾಕಿಸ್ತಾನದ ಭಯೋತ್ಪಾದನೆಯನ್ನು ಭಾರತ ಬಟಾ ಬಯಲು ಮಾಡಿದೆ. ಇತ್ತ ಭಾರತದಲ್ಲಿ ಪಾಕಿಸ್ತಾನದ ಯಾವುದೇ ಆಟ ನಡೆಯುತ್ತಿಲ್ಲ. ಇದರಿಂದ ಕುಪಿತಗೊಂಡಿರುವ ಪಾಕಿಸ್ತಾನ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದೆ ಎಂದು ಭಾರತ ತಿರುಗೇಟು ನೀಡಿದೆ.