ಚಿಕ್ಕೋಡಿ: ಕಾಂಗ್ರೆಸ್ ನಿಂದ ಬರುವವರಿಗೆ ಸ್ವಾಗತ, ಹಾಗೆಯೇ ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡ್ತೇವೆ ಎಂದು ಮಾಜಿ ಸಿಎಂ ಬಿಎಸ್‌ಯಡಿಯೂರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ವಸತಿ ಸಚಿವ ವಿ ಸೋಮಣ್ಣ ಪಕ್ಷ ಬಿಡ್ತಾರೆ ಅನ್ನೋದ್ರಲ್ಲಿ ಸತ್ಯಾಂಶ ಇಲ್ಲ, ಏನೂ ನಮ್ಮೊಳಗೆ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ ಎಂದು ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇದ್ದ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದರು.
ಮೋದಿ ಬರ್ತಾಯಿರೋದ್ರಿಂದ ಕಾಂಗ್ರೆಸ್‌ಗೆ ಸೋಲಿನ ಭೀತಿ ಜಾಸ್ತಿ ಆಗಿದೆ ಅನ್ನೋದು ನಿಜ. ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂತೋಷ ಪಡುತ್ತೇನೆ, ಕರ್ನಾಟಕಕ್ಕೆ ನಿರಂತರವಾಗಿ ಅವರು ಹೆಚ್ಚು ಒತ್ತು ಕೊಡ್ತಿದ್ದಾರೆ. ಅದಕ್ಕೆ ಬರ್ತಿದ್ದಾರೆ ಎಂದು ಸೋಲಿನ ಭೀತಿಯಿಂದ ರಾಜ್ಯಕ್ಕೆ ಪದೇ ಪದೇ ಮೋದಿ, ಅಮಿತ್ ಶಾ ಬರ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಡಿಕೆ ಶಿವಕುಮಾರ್ ಅವರು ಎಲ್ಲರನ್ನೂ ಕರೆದು ಮಾತನಾಡುವುದನ್ನು ನಿರಂತರವಾಗಿ ಮಾಡ್ತಿದ್ದಾರೆ. ಆ ತರ ಯಾವುದಕ್ಕೂ ನಮ್ಮ ಮುಖಂಡರು ಬೆಲೆ ಕೊಡ್ತಿಲ್ಲ. ಯಾರು ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಟಿಕೆಟ್ ನೀಡುವ ಬಗ್ಗೆ ಚುನಾವಣಾ ಸಮಿತಿಯಲ್ಲಿ ಚರ್ಚೆ ಆಗುತ್ತದೆ. ನಂತರವೇ ಅಂತಿಮವಾಗಿ ಯಾರಿಗೆ ಟಿಕೆಟ್ ಕೊಡಬೇಕು ಅಂತಾ ತೀರ್ಮಾನ ಮಾಡಲಾಗುತ್ತೆ ಎಂದು ಹೇಳಿದರು.