ಶಿವಮೊಗ್ಗ: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಲ್ಲದೇ, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರತಿಭಟನೆಯ ವೇಳೆ ಬಿಜೆಪಿಯ ಫ್ಲೆಕ್ಸ್ ಕಿತ್ತು ಹಾಕಿದ್ದು, ಇದೇ ವೇಳೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬ್ಯಾರಿಕೇಡ್ ದಾಟಿ ನುಗ್ಗಲು ಯತ್ನಿಸಿದ ಆಕ್ರೋಶಿತ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದ್ದಾರೆ.ಒಳಮೀಸಲಾತಿ ಆಕ್ಷೇಪಿಸಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿಗೆ ಸಚಿವ ಪ್ರಭು ಚವ್ಹಾಣ್ ಪತ್ರ ಬರೆದಿದ್ದು, ಉನ್ನತ ಪೀಠವನ್ನು ರಚಿಸಿ ಪರಾಮರ್ಶಿಸಬೇಕು ಎಂದು ಆಗ್ರಹ ಮಾಡಿದ್ದಾರೆ.