ಬೆಂಗಳೂರು: ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಇದಕ್ಕೆ ಕ್ಷಮೆಯೇ ಇಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೇಸರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಮತ್ತೆ ನಿಮಗೆ ಅಧಿಕಾರ ಕೊಡಲ್ಲ ಎಂದು ಶೆಟ್ಟರ್ಗೆ ಹೇಳಿದ್ದೀವಾ? ಎಂದು ಪ್ರಶ್ನಿಸಿದ್ದಾರೆ. ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಕೇಂದ್ರಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಪ್ರಧಾನ್ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.
ಜಗದೀಶ್ ಶೆಟ್ಟರ್ಗೆ ಒಳ್ಳೆಯದಾಗಲಿ, ಇನ್ನು ಹೆಚ್ಚಾಗಿ ಮಾತಾಡಲ್ಲ. ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತ. ನಾನೇ ಮುಂದೆ ನಿಂತು ಶೆಟ್ಟರ್, ಸವದಿಯನ್ನು ಸ್ವಾಗತಿಸುವೆ, ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದರು.
ಬಿಜೆಪಿಯಲ್ಲಿ ಎಲ್ಲಾ ಸ್ಥಾನಮಾನ ಅನುಭವಿಸಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದಾರೆ, ನಿಮಗೆ ಬಿಜೆಪಿ ಏನು ಅನ್ಯಾಯ ಮಾಡಿದೆ ?ನನಗೆ, ಜಗದೀಶ್ ಶೆಟ್ಟರ್ಗೆ, ಲಕ್ಷ್ಮಣ ಸವದಿಗೆ ಪಕ್ಷ ಹಲವು ಅವಕಾಶ ನೀಡಿದೆ, ನಿಜಕ್ಕೂ ಶೆಟ್ಟರ್, ಸವದಿ ಬಿಜೆಪಿ ತೊರೆದಿದ್ದು ಬೇಸರ ತಂದಿದೆ ಎಂದರು. ನನ್ನ ಸಂಪೂರ್ಣ ಬದುಕನ್ನು ಬಿಜೆಪಿ ದೇಶಕ್ಕೆ ಮುಡಿಪಿಟ್ಟಿದ್ದೇನೆ. BJP ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಆಗಲ್ಲ ಎಂದು ತಿಳಿಸಿದರು.