ಬೆಂಗಳೂರು: ಸಚಿವ ನಾರಾಯಣ ಗೌಡರು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಜತೆಗೂ ಮಾತಾಡಿದ್ದೇನೆ. ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಸಂತೋಷವಾಗಿ ಬಿಜೆಪಿಯಲ್ಲೇ ಇದ್ದು ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಮಾಧ್ಯಮದವರ ಜೊತೆಗೆ ಮಾತನಾಡಿ, ನಮ್ಮ ಶಾಸಕರು ಯಾರೂ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಇಲ್ಲೇ ಇದ್ದು ಕೆಲಸ ಮಾಡ್ತೀವಿ ಅಂತ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರಿದ್ದು, ಇನ್ನೂ ಕೆಲವರು ಬಿಜೆಪಿ ತ್ಯಜಿಸಲಿದ್ದಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಹೈಕಮಾಂಡ್, ಅಸಮಾಧಾನಿತರನ್ನು ಕರೆದು ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಪಕ್ಷದಲ್ಲಿ ಉಳಿಸಿಕೊಳ್ಳುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ಯಾತ್ರೆಯಲ್ಲಿ ಪಾಲ್ಗೊಳ್ಳದೆ ಪಕ್ಷದ ಜೊತೆ ಅಂತರ ಕಾಪಾಡಿಕೊಂಡಿದ್ದರು. ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಮಾತುಗಳೂ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗಿತ್ತು.
ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಅಂತಾ ಕೆಲವೊಂದು ಫೋಟೋಗಳು ಹರಿದಾಡಿದ್ದವು. ಆದರೆ ದೆಹಲಿಗೆ ಹೋಗಿ ಬಂದ ನಂತರ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರು.