ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿಲ್ಲ.ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿ, ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೇಲಾಗಿ, ಅವರು ಕರ್ನಾಟಕದ ಮಟ್ಟಿಗೆ ಒಂದು ದೊಡ್ಡ ಶಕ್ತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ಇದೊಂದು ವದಂತಿ ಮಾತ್ರ , ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಶ್ರಮಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪನವರ ಮುಂದಾಳತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪನವರು ಕಾರ್ಯೋನ್ಮುಖರಾಗಿದ್ದಾರೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ವದಂತಿಗೆ ಯಾರೂ ಕಿವಿಗೊಡುವುದು ಬೇಡ ಎಂದರು. ಬಿಜೆಪಿ ಎಂದರೆ ಬ್ರೋಕರ್ ಪಾರ್ಟಿ ಮತ್ತು ವಿಧಾನಸೌಧ ಶಾಪಿಂಗ್ ಮಾಲ್ ಆಗಿಬಿಟ್ಟಿದೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದರು.
ಪ್ರಿಯಾಂಕ್ ಅವರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಕಳೆದುಕೊಂಡಿದೆ, ಭ್ರಷ್ಟಾಚಾರದಿಂದ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಚುನಾವಣೆ ಬಂದಾಗ ವಿಪಕ್ಷಗಳ ಟೀಕೆ ಸಾಮಾನ್ಯ. ಆದರೆ ರಾಜ್ಯದ ಜನರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು.