ಚಿಕ್ಕಮಗಳೂರು: ಚಿಕ್ಕಮಗಳೂರಿನ ಟೂರಿಸಂನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 5 ದಿನಗಳ ಚಿಕ್ಕಮಗಳೂರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ನಿಮಗೇನು ಸಹಾಯ ಬೇಕು ನಾನು ಮಾಡುತ್ತೇನೆ. ಎಷ್ಟು ಹಣ ಬೇಕು ನಾನು ಕೊಡುತ್ತೇನೆ ಎಂದು ಜಿಲ್ಲಾಧಿಕಾರಿ ಕೆಎನ್ ರಮೇಶ್‌ಗೆ ಹೇಳಿದರು.
ಚಿಕ್ಕಮಗಳೂರಿನ ಟೂರಿಸಂ ಬೆಳೆಸಿ. ನಿಮಗೆ 1 ವರ್ಷ ಅವಕಾಶ ನೀಡುತ್ತೇನೆ. ಮುಂದಿನ ಚಿಕ್ಕಮಗಳೂರು ಹಬ್ಬಕ್ಕೆ ಏರ್‌ಸ್ಟ್ರಿಪ್ ಇರಬೇಕು. ನಾವು ಅಲ್ಲಿ ಇಳಿದು ಇಲ್ಲಿಗೆ ಬರಬೇಕು. ಎಲ್ಲಾ ತಯಾರಿ ಮಾಡಿ. ಇದೇ ವರ್ಷ ಮುಳ್ಳಯ್ಯನಗಿರಿಗೆ ರೋಪ್ ವೇ ಸ್ಯಾಂಕ್ಷನ್ ಮಾಡಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ಹಣ ನೀಡುವುದಾಗಿ ಹೇಳಿದ್ದಾರೆ. ಆ ರೋಪ್ ವೇಯನ್ನು ಕೂಡಾ ಆದಷ್ಟು ಬೇಗ ಮಾಡೋಣ ಎಂದರು.
ಚಿಕ್ಕಮಗಳೂರಿನಲ್ಲಿ ಅಂತಾರಾಷ್ಟ್ರಿಯ ಮಟ್ಟದ ಟೂರಿಸಂ ಮಾಡಲು ಅವಕಾಶವಿದೆ. ಅಡ್ವೆಂಚರ್ ಟೂರಿಸಂ ಚಿಕ್ಕಮಗಳೂರಿನಲ್ಲಿ ಬಿಟ್ಟರೆ ಮತ್ತೆಲ್ಲೂ ಮಾಡಲು ಸಾಧ್ಯವಿಲ್ಲ. ಸಣ್ಣಪುಟ್ಟದ್ದು ಮಾಡುವುದನ್ನು ಬಿಟ್ಟು ದೊಡ್ಡದ್ದನ್ನು ಮಾಡಿ. ದೊಡ್ಡ ಮಾಸ್ಟರ್ ಪ್ಲಾನ್ ಮಾಡಿ ಎಂದು ಸೂಚಿಸಿದರು.
ಸ್ವಿಜರ್ಲ್ಯಾಂಡ್ ಯಾವ ರೀತಿ ಟೂರಿಸಂ ಬೆಳೆಸಿದ್ದಾರೆ, ಅದೇ ರೀತಿ ಚಿಕ್ಕಮಗಳೂರು ಮತ್ತು ಕೊಡಗಿನಲ್ಲೂ ಬೆಳೆಸಬಹುದು. ಆ ರೀತಿ ಬೆಳೆಸಬೇಕು ಅನ್ನೋದು ನನ್ನ ಇಚ್ಛೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನಿಮಗೇನು ಬೇಕು, ಯಾವ ರೀತಿಯ ಸಪೋರ್ಟ್ ಬೇಕು ಅದಕ್ಕೆ ನಾನು ವ್ಯವಸ್ಥೆ ಕಲ್ಪಿಸುತ್ತೇನೆ ಎಂದಿದ್ದಾರೆ.