ಬೆಂಗಳೂರು : ಲಂಚ ಪ್ರಕರಣದಲ್ಲಿ ಸಿಲುಕಿರುವ ಪ್ರಶಾಂತ್ ಮಾಡಾಳುರನ್ನು ಅಮಾನತು ಮಾಡಲು ಸೂಚಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿ, ಈ ಲಂಚ ಪ್ರಕರಣ ಸರ್ಕಾರಕ್ಕೆ ಮುಜುಗರ ತರುವ ವಿಚಾರವಾಗಿದ್ದು, ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. “ಆರೋಪಿ ಅಧಿಕಾರಿ 48 ತಾಸು ಪೊಲೀಸ್ ಬಂಧನದಲ್ಲಿದ್ದರೆ ನಿಯಮದಂತೆ ಅಮಾನತು ಮಾಡಬೇಕು. ಮಾಡಿಲ್ಲ ಎಂದರೆ ಜಲಮಂಡಳಿಗೆ ಸೂಚನೆ ನೀಡುತ್ತೇವೆ. ಬೆಂಗಳೂರು ಜಲಮಂಡಳಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಒಂದು ವೇಳೆ ಕ್ರಮ ಕೈಗೊಂಡಿಲ್ಲ ಎಂದಾದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಹೇಳಲಾಗುವುದು, ಲೋಕಾಯುಕ್ತ ಪೊಲೀಸರು ಹಾಗೂ ವಕೀಲರ ಕಾರ್ಯ ವಿಧಾನ ಹೀಗೆ ಇರಬೇಕೆಂದು ಸರ್ಕಾರ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದರು.
ವಿರೂಪಾಕ್ಷಪ್ಪ ಅವರಿಗೆ ಜಾಮೀನು ಸಿಕ್ಕಿರೋದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ , ಲೋಕಾಯುಕ್ತ ವಕೀಲರು ಸಮರ್ಥ ವಾದ ಮಂಡಿಸಿಲ್ಲವೆಂದರೆ ಅದಕ್ಕೆ ಸಂಬಂಧಪಟ್ಟವರೇ ಜವಾಬ್ದಾರರಾಗುತ್ತಾರೆ ಎಂದರು. ಲಂಚ ಪ್ರಕರಣದಲ್ಲಿ ಸಿಲುಕಿರುವ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಅವರನ್ನು ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.