ಶಿವಮೊಗ್ಗ : ಉಚಿತ ವಿದ್ಯುತ್ ಕೊಡವುದಿರಲಿ, ಎಷ್ಟೇ ಹಣ ಕೊಡ್ತೀವಿ ಅಂದ್ರೂ ವಿದ್ಯುತ್ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುತ್ತಿಲ್ಲ, ಯಾಕೆಂದ್ರೆ ಸರ್ಕಾರದ ಬಳಿ ಹಣ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ಖಾಸಗಿ ವಾಹನ ಒಕ್ಕೂಟದ ಪ್ರತಿಭಟನೆ ನಡೆಯುತಿದ್ದು, ಗ್ಯಾರಂಟಿ ಅಂತ ಜನರನ್ನು ಪರದಾಡುವಂತೆ ಮಾಡಿದ್ದಾರೆ. ಬಸ್ ಫ್ರೀ ಯಿಂದ ಬೆಂಗಳೂರಿನಲ್ಲಿ ಮುಷ್ಕರ ಆರಂಭವಾಗಿದೆ. ಗೃಹ ಲಕ್ಷ್ಮಿ ಕೊನೇ ಪಕ್ಷ ಅರ್ಜಿ ಹಾಕಿದವರಿಗೆ ಯಾವಾಗ ಹಣ ಕೋಡ್ತಾರೆ ಅನ್ನೋದನ್ನು ಹೇಳಲಿ. ಬಸ್ ಫ್ರೀಯಿಂದ ಬೆಂಗಳೂರಿನಲ್ಲಿ ಮುಷ್ಕರ ಆರಂಭವಾಗಿದೆ. ಇವರ ಐದೂ ಗ್ಯಾರಂಟಿ ಸಂಪೂರ್ಣ ವಿಫಲವಾಗಿದೆ. ಸಿಎಂ, ಡಿಸಿಎಂ ಅದಕ್ಕೆ ಸ್ಪಷ್ಟನೆ ನೀಡಲಿ ಎಂದರು.
ಇದನ್ನೂ ಓದಿ : ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ ತಟ್ಟುತ್ತಿದೆ: ಕುಮಾರಸ್ವಾಮಿ
ರೈತರ ಪರಿಹಾರದ ಬಗ್ಗೆ ವಿಚಾರ ವ್ಯಕ್ತಪಡಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬ ರೈತನನ್ನೂ ಭೇಟಿ ಆಗ್ತಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ 150ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬೆಳೆಗೆ ಪರಿಹಾರ ಸಿಗುತ್ತಿಲ್ಲ. ಬರ ಪೀಡಿತ ತಾಲೂಕು ಘೋಷಣೆ ಮುಂದೂಡಿದ್ದಾರೆ. ಕಂದಾಯ ಇಲಾಖೆ ಸತ್ತೋಗಿದೆಯಾ. ಸರ್ವೆ ಮಾಡದೆ ಕೇಂದ್ರ ಸರ್ಕಾರ ಪರಿಹಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ತಲೆದೋರಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಟೀಕೆ ಮಾಡಿರುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಹರಿಪ್ರಸಾದ್ ತನ್ನದೇ ಪಕ್ಷದವರ ವಿರುದ್ಧ ಮಾತನಾಡಿದ್ದಾರೆ. ಬರುವ ದಿನ ಇನ್ನಷ್ಟು ಜನ ವಿರೋಧಿಸಲಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಹರಿ ಪ್ರಸಾದ್, ಸಿದ್ದರಾಮಯ್ಯ ಮಾತನಾಡುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ದುರಾಡಳಿತ ಮತ್ತು ಗುಂಪುಗಾರಿಕೆ ಇದೆ : ಎ.ನಾರಾಯಣಸ್ವಾಮಿ
ಇನ್ನೂ ಮುಂದುವರಿದು ಮಾತನಾಡಿದ ಅವರು, ದೇಶವನ್ನು ಉಳಿಸಲು ಬನ್ನಿ ಅಂದಾಗ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನಮಗೆ ಒಂದೊಂದು ಸ್ಥಾನವೂ ಮುಖ್ಯ. ದೇವೇಗೌಡರು ಕೂಡ ಬಿಜೆಪಿಯನ್ನು ಕೋಮುವಾದಿ ಪಕ್ಷ ಹೇಳುತಿದ್ದರು. ಈಗ ಅವರಿಗೆ ಅರ್ಥವಾಗಿದೆ. ತಮ್ಮ ಪಕ್ಷ ಉಳಿಸಲು ಮೈತ್ರಿ ಅಂತಾನೂ ಅವರು ಹೇಳಿದ್ದಾರೆ. ಬಿಜೆಪಿ ಕಳೆದ ಬರಿ 25 ಸೀಟು ಲೋಕಸಭೆಯಲ್ಲಿ ಬಂದಿತ್ತು. ಕಾಂಗ್ರೆಸ್ ಗೆ ಕೇವಲ ಒಂದು ಸೀಟ್ ಸಿಕ್ಕಿತ್ತು.ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ 28 ಸೀಟು ಸಿಗುತ್ತೆ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲಿದೆ ಎಂದು ತಮಾಷೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದ ಈಶ್ವರಪ್ಪ, ಕಾಂಗ್ರೆಸ್ ದೇಶ ಲೂಟಿ ಮಾಡಿದ ಸರ್ಕಾರ. ಹೀಗಾಗಿ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಅಟಲ್ ಜೀ ಬೇಷರತ್ ಬೆಂಬಲ ನೀಡಿದ್ರು. ಹೆಚ್ ಡಿ ದೇವೇಗೌಡ ಪ್ರಧಾನಿಯಾದ್ರು. ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷ ರಾಗಿದ್ರು. ಮೊದಲ ಬಾರಿ ಸಿದ್ದರಾಮಯ್ಯನಿಗೆ ಗೂಟದ ಕಾರು ಸಿಕ್ಕಿದ್ದು ಬಿಜೆಪಿಯಿಂದ. ಆಗ ಬಿಜೆಪಿಗೆ ರಾಷ್ಟ್ರೀಯ ವಾದಿ ಪಕ್ಷ ಅಂತಿದ್ರು. ಯಾಕೆಂದ್ರೆ ಅವರಿಗೆ ಗೂಟದ ಕಾರು ಸಿಕ್ಕಿತ್ತು. ಈಗ ಕೋಮುವಾದಿ ಅಂತಿದ್ದಾರೆ ಎಂದು ಕೆಣಕಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.