ಬೆಂಗಳೂರು : ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಶಾಸಕ ಬಿ.ವೈ ವಿಜಯೇಂದ್ರ ಇಂದು (ನ.15) ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬೆಳಗ್ಗೆ 9:30ಕ್ಕೆ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರಿಂದ ವಿಜಯೇಂದ್ರಗೆ ಜವಾಬ್ದಾರಿ ಹಸ್ತಾಂತರ ನಡೆಯಲಿದೆ.
ಈ ಕುರಿತು ಟ್ವಿಟ್ಟರ್‌ನಲ್ಲಿ ಆಹ್ವಾನ ಪತ್ರಿಕೆ ಹಂಚಿಕೊಂಡಿರುವ ವಿಜಯೇಂದ್ರ, ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ವಹಿಸಿರುವ ಜವಬ್ದಾರಿಯನ್ನು ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಸ್ವೀಕರಿಸಲಿದ್ದೇನೆ. ಎಲ್ಲರು ಬಂದು ಹರಸಿ, ಹಾರೈಸಿ, ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ವಿಜಯೇಂದ್ರ ಆಯ್ಕೆ; ನಮಗಾಗದವರು ವಿಷಯವನ್ನು ದೊಡ್ಡದು ಮಾಡ್ತಿದ್ದಾರೆ: ವಿಶ್ವನಾಥ್
ವಿಜಯೇಂದ್ರ ಪದಗ್ರಹಣಕ್ಕೂ ಮೊದಲು ಅವರಿಗೆ ಬಿಜೆಪಿ ಕಚೇರಿಯಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಗುತ್ತದೆ. ಬಳಿಕ ಜಗನ್ನಾಥ ಭವನದ ಮುಂಭಾಗ ಗೋಪೂಜೆ ನಡೆಸಲಿರುವ ವಿಜಯೇಂದ್ರ, ನಂತರ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುವ ಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.
ಧಾರ್ಮಿಕ ಪೂಜಾ ಕಾರ್ಯಕ್ರಮದ ಬಳಿಕ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಜಯೇಂದ್ರಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಬಿಎಸ್‌ವೈ ಹುಟ್ಟೂರಲ್ಲಿ ಮನೆ ಮಾಡಿದ ಸಂಭ್ರಮ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಹಿನ್ನೆಲೆ ಬಿಎಸ್‌ವೈ ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ : ʼಯಡಿಯೂರಪ್ಪ ಮಗ ಎಂದು ವಿಜಯೇಂದ್ರಗೆ ಜವಾಬ್ದಾರಿ ಕೊಟ್ಟಿಲ್ಲʼ
ಬೂಕನಕೆರೆ ಗ್ರಾಮಸ್ಥರು ಮತ್ತು ಬಿಎಸ್‌ವೈ ಅಭಿಮಾನಿಗಳು ಗ್ರಾಮದ ಆದಿಶಕ್ತಿ ಗೋಗಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಿರುವ ಗ್ರಾಮಸ್ಥರು ಬಳಿಕ ಸಿಹಿಹಂಚಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.