ಮೈಸೂರು: ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದೇ ಬಿಡ್ತೀವಿ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಭಾರತೀಯ ಜನತಾ ಯುವ ಮೋರ್ಚಾ ಯುವ ಸಮಾವೇಶದಲ್ಲಿ ಮಾತನಾಡಿ, ರಾಜ್ಯಗಳ ಜನರು ಮತ್ತು ಯುವಕರು ಡಬಲ್ ಇಂಜಿನ್ ಸರ್ಕಾರವನ್ನು ನಂಬುತ್ತಾರೆ ಅದು ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದರು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯೋಧರಂತೆ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವಂತೆ ದುಡಿಯಬೇಕಿದೆ. ಆ ಮೂಲಕ ಪ್ರಧಾನಿ ಮೋದಿ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದೇ ಬಿಡ್ತೀವಿ ಎಂದು ಹಗಲುಗನಸು ಕಾಣುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಅಕ್ಕಿ ಚೀಲದಲ್ಲಿ ಸಿದ್ದರಾಮಯ್ಯ ಫೋಟೋ ಹಾಕಿಕೊಂಡು ಪುಗಸಟ್ಟೆ ಪ್ರಚಾರ ಪಡೆದರು ಎಂದು ಕಿಡಿಕಾರಿದರು. ಯಾವುದೇ ದುಷ್ಟಶಕ್ತಿಯಿಂದ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ , ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ, ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸುವ ಮೂಲಕ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಿದ್ದು ಕಾಂಗ್ರೆಸ್ ಎಂದು ತಿಳಿಸಿದರು.
ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ. ಭ್ರಷ್ಟಾಚಾರಕ್ಕೂ ಕಾಂಗ್ರೆಸ್ಸಿಗೂ ಅವಿನಾಭಾವ ಸಂಬಂಧವಿದೆ ಎಂದರು.