ಬೆಂಗಳೂರು : ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ’ ಹಿಂಪಡೆಯುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಹಮ್ಮಿಕೊಂಡಿವೆ.
ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ಸಂಘಟನೆಗಳು ‘#ಭೂಸುಧಾರಣೆ ಕಾಯಿದೆ ತಿದ್ದುಪಡಿ ಹಿಂಪಡೆಯಿರಿ’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡ ಸಂಘಟನೆಗಳ ಆಗ್ರಹವೇನು?
- ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು
- ಕೃಷಿ ಭೂಮಿ ಹೊಂದಲು ಆರ್ ಟಿಸಿ (RTC) ಇರಲೇಬೇಕು ಎಂಬ ಷರತ್ತು ತೆಗೆಯಬೇಕು
- ಕೇವಲ ಕನ್ನಡಿಗನಿಗೆ ಮಾತ್ರ ಕೃಷಿ ಭೂಮಿಯನ್ನು ಮಾರಬಹುದು ಎಂಬ ನಿವಾಸ ಷರತ್ತು (domicile clause) ತರಬೇಕು
- ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಇಲ್ಲಿಯವರೆಗೆ ಆದ ಪರಿಣಾಮಗಳನ್ನು ಸರಿಪಡಿಸಲು ಯೋಜನೆ ರೂಪಿಸಬೇಕು
- ಭೂ ಸುಧಾರಣಾ ಕಾಯ್ದೆಯನ್ನು ತೋಟಗಾರಿಕಾ (plantation) ಬೆಳೆಗಳಿಗೂ ವಿಸ್ತರಿಸಬೇಕು
- ಬೆಂಗಳೂರೇತರ ಜಿಲ್ಲೆಗಳ ಕೈಗಾರಿಕಾ ಪ್ರದೇಶ ಬಿಟ್ಟರೆ ಇತರ ಕಂದಾಯ ಭೂಮಿ ಮಾರಾಟಕ್ಕೆ ನಿಯಂತ್ರಣ ತರಬೇಕು
ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ದುಷ್ಪರಿಣಾಮಗಳೇನು?
ಈ ಹಿಂದಿನ ಬಿಜೆಪಿ ಸರ್ಕಾರ 1961ರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ತಿದ್ದುಪಡಿ ಕಾಯ್ದೆ ಕೃಷಿ ಭೂಮಿ ಖರೀದಿಸಲು ಕೃಷಿಯೇತರ ವ್ಯಕ್ತಿಗಳಿಗೂ ಅವಕಾಶ ನೀಡುತ್ತದೆ ಹಾಗೂ ಭೂಮಿ ಖರೀದಿಸಲು ಒಬ್ಬ ವ್ಯಕ್ತಿಗಿದ್ದ ಮಿತಿಯನ್ನು ಹೆಚ್ಚಿಸಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಲ್ಲಿದ್ದ ಸೆಕ್ಷನ್ 63 (ಎ), 79 (ಎ), (ಬಿ) ಆನಿಂ (ಸಿ) ಗಳು ತಿದ್ದುಪಡಿ ಆಗಿವೆ.
ಸೆಕ್ಷನ್ 63 (ಎ) ಪ್ರಕಾರ ಐದು ಜನ ಸದಸ್ಯರಿರುವ ಕುಟುಂಬಕ್ಕೆ ಭೂಮಿ ಖರೀದಿಸಲು 10 ಎಕರೆಗಳ ಮಿತಿಯಿತ್ತು. ಅದನ್ನು 70 ಎಕರೆಗೆ ಹೆಚ್ಚಿಸಲಾಗಿದೆ. ಐದಕ್ಕಿಂತಲೂ ಹೆಚ್ಚಿನ ಸದಸ್ಯರಿರುವ ಕುಟುಂಬಕ್ಕೆ ಭೂಮಿ ಖರೀದಿಸಲು 20 ಎಕರೆಗಳ ಮಿತಿಯಿತ್ತು. ಅದನ್ನು 40 ಎಕರೆಗಳಿಗೆ ಹೆಚ್ಚಿಸಲಾಗಿದೆ.
ಸೆಕ್ಷನ್ 79 (ಎ) ಪ್ರಕಾರ ಯಾವುದೇ ವ್ಯಕ್ತಿಯ ವಾರ್ಷಿಕ ಆದಾಯ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಆದಾಯಕ್ಕಿಂತ ಹೆಚ್ಚಿದ್ದರೆ ಆ ವ್ಯಕ್ತಿಗೆ ಕೃಷಿ ಭೂಮಿ ಖರೀದಿಸಲು ಅವಕಾಶವಿರಲಿಲ್ಲ. ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಹಾಗೂ ಸೇವಾ ಸಂಘಗಳು, ಕಂಪನಿ, ಸಹಕಾರ ಸಂಘಗಳಂತಹ ಸಂಸ್ಥೆಗಳು ಕೃಷಿ ಭೂಮಿ ಖರೀದಿಸುವುಕ್ಕೆ ನಿರ್ಬಂಧ ಇತ್ತು. ಈ ಸಂಘ-ಸಂಸ್ಥೆಗಳು ಕೃಷಿ ಭೂಮಿ ಖರೀದಿಸಿದರೆ ದಂಡ ಮತ್ತು ಶಿಕ್ಷೆ ವಿಧಿಸಬಹುದಿತ್ತು. ಆದರೆ ತಿದ್ದುಪಡಿ ಕಾಯ್ದೆಯಲ್ಲಿ ಸರ್ಕಾರ ಈ ಸೆಕ್ಷನ್ ಅನ್ನು ತೆಗೆದು ಹಾಕುವ ಮೂಲಕ ಸುಮಾರು 1O8 ಎಕರೆಗಳವರೆಗೆ ಕೃಷಿ ಭೂಮಿ ಖರೀದಿಸಲು ಅನುಮತಿ ನೀಡಿದೆ.
ತಿದ್ದುಪಡಿ ಕಾಯ್ದೆ ಯಾರು ಬೇಕಾದರೂ ಕೃಷಿ ಕ್ಷೇತ್ರಕ್ಕೆ ಬರಲು ಅವಕಾಶ ನೀಡುತ್ತದೆ. ರಾಜ್ಯದಲ್ಲಿ ಸುಮಾರು 11.79 ಲಕ್ಷ ಹೆಕ್ಟೆರ್ ಭೂಮಿ ಯಾವುದೇ ಕೃಷಿ ಚಟುವಟಿಕೆಗಳು ನಡೆಯದೇ ಪಾಳುಬಿದ್ದಿದೆ. ಇದನ್ನು ಕೃಷಿ ಆಸಕ್ತಿ ಉಳ್ಳವರು ಖರೀದಿಸಲು ತಿದ್ದುಪಡಿ ಕಾಯ್ದೆ ಅವಕಾಶ ನೀಡುತ್ತದೆ ಎಂಬುವುದು ಸರ್ಕಾರದ ವಾದ. ಈ ಮೂಲಕ ಕಾರ್ಪೊರೇಟ್ ವಲಯ ಕೃಷಿ ಭೂಮಿ ತಮ್ಮದಾಗಿಸುಕೊಳ್ಳುವ ಅವಕಾಶವನ್ನು ಸರ್ಕಾರ ಗೌಪ್ಯವಾಗಿ ನೀಡಿದೆ.
ಕೃಷಿ ಭೂಮಿಯನ್ನು ಕೃಷಿಯೇತರರು ಖರೀದಿಸಲು ಅವಕಾಶ ನೀಡಿದರೆ ಕಾರ್ಪೊರೇಟ್ ಕಂಪನಿಗಳು ಫಲವತ್ತಾದ ಭೂಮಿಯನ್ನು ನುಂಗಿ ನೀರು ಕುಡಿಯಬಹುದು. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಸಂಕಷ್ಟದಿಂದ ಹೊರಬರಲು ತಮ್ಮ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಬಹುದು. ಇದರಿಂದ ರೈತರಿಗೆ ತಾತ್ಕಾಲಿಕ ಪರಿಹಾರ ಸಿಗಬಹುದು. ಆದರೆ, ಕೈಯಲ್ಲಿದ್ದ ಹಣ ಮುಗಿದ ಬಳಿಕ ರೈತ ಏನು ಮಾಡಬೇಕು?.
ಕೃಷಿ ಭೂಮಿ ಕಾರ್ಪೊರೇಟ್ ಕೈಗೆ ಸಿಕ್ಕರೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ ಕಂಪೆನಿಗಳು ತಲೆಯೆತ್ತಬಹುದು. ಇದರಿಂದ ಗ್ರಾಮೀಣ ಜನರ ಬದುಕು ದುಸ್ತರವಾಗುವುದರಲ್ಲಿ ಅನುಮಾನವಿಲ್ಲ. ನಗರೀಕರಣದ ಮಿತಿ ಮೀರಬಹುದು.
ಅಂದು ಗುಡುಗಿದ ಸಿದ್ದರಾಮಯ್ಯ ಇಂದು ಏನು ಮಾಡ್ತಾರೆ? : ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಾಗ, ಈಗ ಆಡಳಿತದಲ್ಲಿರುವ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿತ್ತು. ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಆಗ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆಗ ವಿಪಕ್ಷ ನಾಯಕರ ಸ್ಥಾನದಲ್ಲಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ರೈತರ ಪಾಲಿಗೆ ಭೂ ಸುಧಾರಣಾ ಕಾಯ್ದೆ ಕರಾಳ ಶಾಸನ, ಭೂ ತಾಯಿಗೆ ಮಾಡಿದ ದ್ರೋಹ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ರೈತ ಸಂಘಟನೆಗಳ ಜೊತೆಗೂಡಿ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಕೂಡ ಮಾಡಿದ್ದರು.
ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಹಾಗಾಗಿ, ಅಂದು ವಿಪಕ್ಷ ಸ್ಥಾನದಲ್ಲಿ ಕುಳಿತು ಕಾಯ್ದೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ, ಈಗ ಅಧಿಕಾರ ಕೈಯಲ್ಲಿ ಇರುವಾಗ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ. ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದ್ದ ಸಿದ್ದು ಸರ್ಕಾರ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನೂ ಹಿಂಪಡೆಯುತ್ತಾ ಕಾದು ನೋಡಬೇಕಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.