ಬೆಂಗಳೂರು: ರಾಜ್ಯದ ನೀರಾವರಿಗೆ ಮಣ್ಣಿನ ಮಕ್ಕಳಿಂದ ಅನ್ಯಾಯವಾಗಿದೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ‘ನೆಲಮಂಗಲದಲ್ಲಿ ನಡೆದ ಸಭೆಯೊಂದರಲ್ಲಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಮಣ್ಣಿನ ಮಕ್ಕಳಿಂದ ಕಾವೇರಿಗೆ ದ್ರೋಹ ಆಗಿದೆ ಅಂತ ಹೇಳಿದ್ದಾರೆ. ಆದರೆ, ತಮ್ಮಿಂದ ಏನು ಆಗಿದೆ ಎನ್ನುವುದನ್ನು ಹೇಳಬೇಕಿತ್ತು. ಆದರೆ, ಬರೀ ಸತ್ಯವನ್ನೇ ಹೇಳಿ ಜನರ ಹಾದಿ ತಪ್ಪಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಇವರಿಂದ ನೀರಾವರಿಗೆ ನ್ಯಾಯ ಸಿಕ್ಕಿದ್ದು ಏನೂ ಇಲ್ಲ. ಆಗಿರುವುದಿಲ್ಲ ಅನ್ಯಾಯವೇ. ಹಿಂದೆ ಮುಖ್ಯ ಮಂತ್ರಿಯಾಗಿದ್ದ ಧರ್ಮಸಿಂಗ್, ಉಪ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನು ಕಾವೇರಿ ವಿಷಯದಲ್ಲಿ ದಾರಿ ತಪ್ಪಿಸಿದ್ದು ಇದೇ ವೀರಪ್ಪ ಮೊಯ್ಲಿ’ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ; ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಈಶ್ವರಪ್ಪ!
‘ಪಿಯರ್ ಲೆಸ್’ನಿಂದ ಸಾಲ ತಂದು ಸಂಬಳ ಕೊಟ್ಟರು:
‘ಈ ಮಹಾನುಭಾವರು ಎರಡು ವರ್ಷ ಮುಖ್ಯಮಂತ್ರಿ ಆಗಿದ್ದರು. ಈ ವ್ಯಕ್ತಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವಾಗ ಬೊಕ್ಕಸವನ್ನು ದಿವಾಳಿ ಮಾಡಿದ್ದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೆ ಹಣ ಇರಲಿಲ್ಲ. ಆಗ ಪಶ್ಚಿಮ ಬಂಗಾಳದ ಪಿಯರ್ಲೆಸ್ ಸಂಸ್ಥೆಗೆ ರಾಜ್ಯವನ್ನು ಒತ್ತೆ ಇಟ್ಟು ಸಾಲ ತಂದವರು ಇವರು. ಇಂಥವರು ಮಣ್ಣಿನ ಮಕ್ಕಳಿಂದ ನೀರಾವರಿಗೆ ಅನ್ಯಾಯ ಆಗಿದೆ ಎಂದು ಸುಳ್ಳು ಹೇಳಿದ್ದಾರೆ’ ಎಂದು ಕಿಡಿ ಕಾರಿದರು.
ಸರಸ್ವತಿ ಪುತ್ರರ ಬಾಯಲ್ಲಿ ಸುಳ್ಳು ಬರಬಹುದೇ?:
‘ಓಹೋ.. ಇವರು ಕವಿ ಸರ್ವೋತ್ತೋಮರು, ಮಹಾಕವಿಗಳು. ನಮ್ಮ ಕುವೆಂಪು ಅವರಿಗಿಂತ ಮಹಾನ್ ಕವಿಗಳು.. ರಾಮಾಯಣವನ್ನು ಮಹಾನ್ವೇಷಣೆ ಮಾಡಿ ಮಹಾಕಾವ್ಯ ಬರೆದ ಮಹಾನುಭಾವರು. ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದ ಸರಸ್ವತಿ ಪುತ್ರರು. ಇಂಥ ಸರಸ್ವತಿ ಪುತ್ರರ ಬಾಯಲ್ಲಿ ಸುಳ್ಳು ಬರಬಹುದೇ’ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ; ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ಆಘಾತಕಾರಿ: ಕುಮಾರಸ್ವಾಮಿ
ಕಾವೇರಿ ಟ್ರಿಬ್ಯೂನಲ್ ರಚಿಸುವಾಗ ಏನು ಮಾಡಿದ್ದೀರಿ?
‘ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು? ಅದರ ರಚನೆ ವಿರುದ್ಧ ದೇವೇಗೌಡರು ಹೋರಾಟ ನಡೆಸುತ್ತಿದ್ದಾಗ ಇವರ ಪಾತ್ರ ಏನಾಗಿತ್ತು? 1962ರಿಂದ ಕಾವೇರಿ ನೀರಿನ ಹಕ್ಕಿಗಾಗಿ ಜೀವನ ಮೀಸಲಿಟ್ಟ ಆ ಮಣ್ಣಿನ ಮಗನ ಹೋರಾಟದ ಫಲ ಏನೆಂಬುದು ಇವರಿಗೆ ಗೊತ್ತಿಲ್ಲವೇ? ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳು ಹೇಗೆ ನಿರ್ಮಾಣ ಆದವು? ಇವರ ಸಾಧನೆ ಏನು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ರಾಜ್ಯದ ನೀರಾವರಿ ಅನ್ಯಾಯದ ಅಧ್ಯಾಯಗಳನ್ನು ಒಮ್ಮೆ ತಿರುವಿ ಹಾಕಿದರೂ ಇವರು ಎಸಗಿದ ಅನ್ಯಾಯಗಳೇನು ಎನ್ನುವುದು ಗೊತ್ತಾಗುತ್ತದೆ. ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವರಿಂದ ಏನೇನಾಯ್ತು ಎನ್ನುವುದು ತಿಳಿಯುತ್ತದೆ. ಧರಂಸಿಂಗ್ ಅವರನ್ನೇ ದಾರಿ ತಪ್ಪಿಸಿದ್ದ ಈ ವ್ಯಕ್ತಿಯಿಂದಲೇ ಸರ್ಕಾರ ಸಲಹೆ ಸ್ವೀಕರಿಸಲಿ’ ಎಂದು ಲೇವಡಿ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.