ಕೆನಡಾ : ಖಲಿಸ್ತಾನ್ ಪ್ರತ್ಯೇಕವಾದಿ ಗುಂಪಿನ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿನ ಹಿಂದೆ ಭಾರತದ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿರುವ ಕೆನಡಾ ಸರ್ಕಾರ, ಅಲ್ಲಿನ ಭಾರತೀಯ ಗುಪ್ತಚರ ಅಧಿಕಾರಿಯನ್ನು ಉಚ್ಚಾಟನೆ ಮಾಡಿದೆ.
ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿನ ಹಿಂದೆ ಭಾರತದ ಕೈವಾಡ ಇದೆ ಎಂದು ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಮಾಡಿದ್ದರು. ಪ್ರಧಾನಿಯ ಹೇಳಿಕೆ ಅನುಸರಿಸಿ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಕೆನಡಾ ಸರ್ಕಾರ ಹಿರಿಯ ಭಾರತೀಯ ಗುಪ್ತಚರ ಅಧಿಕಾರಿಯನ್ನು ಉಚ್ಚಾಟನೆ ಮಾಡಿದೆ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ.
ಕೆನಡಾದ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಮುಖ್ಯಸ್ಥ ಪವನ್ ಕುಮಾರ್ ರೈ ಅವರನ್ನು ಹೊರ ಹಾಕಲಾಗಿದೆ ಎಂದು ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ. 1997 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಪವನ್ ಕುಮಾರ್ ರೈ ಅವರನ್ನು ಕೆನಡಾದ ಒಟ್ಟಾವಾದಲ್ಲಿ ಭಾರತೀಯ ಹೈಕಮಿಷನ್‌ನ ಪರಿಸರ, ಸಮನ್ವಯ, ಸಮುದಾಯ ವ್ಯವಹಾರಗಳ ಅಧಿಕಾರಿಯಾಗಿಯೂ ನಿಯೋಜಿಸಲಾಗಿತ್ತು.
ಇದನ್ನೂ ಓದಿ : ಪಾಕ್ ಮಾಜಿ ಸಿಎಂ ಇಮ್ರಾನ್ ಖಾನ್ ಪಕ್ಷದ ಹಾಡು ಕದ್ದ ಕಾಂಗ್ರೆಸ್; ಬಿಜೆಪಿ ಆರೋಪ
ಯುಎಸ್ ನ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯಲ್ಲಿ ನಡೆಯಲಿರುವ ಜಿ7 ಸಮಿತಿ ಸಭೆಯಲ್ಲೂ ನಿಜ್ಜಾರ್ ಹತ್ಯೆ ವಿಷಯವನ್ನು ಪ್ರಸ್ತಾಪಿಸುವುದಾಗಿ ಸಚಿವೆ ಜೋಲಿ ಹೇಳಿದ್ದಾರೆ.
ಕೆನಡಾ ದೇಶದ ಪ್ರಜೆಯಾಗಿದ್ದ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿನ ಹಿಂದೆ ಭಾರತದ ಏಜೆನ್ಸಿಗಳ ಕೈವಾಡ ಇದೆ ಎಂದು ಕಳೆದ ವಾರ ಕೆನಡಾ ಸಂಸತ್ (ಹೌಸ್ ಆಫ್ ಕಾಮನ್ಸ್ ) ನಲ್ಲಿ ಅಲ್ಲಿನ ಭದ್ರತಾ ಪಡೆಯ ಮುಖ್ಯಸ್ಥರು ಆರೋಪ ಮಾಡಿದ್ದರು. ಕೆನಡಾದ ನೆಲದಲ್ಲಿ ‘ಕೆನಡಾದ ಪ್ರಜೆಯ ಹತ್ಯೆಯಲ್ಲಿ ವಿದೇಶಿ ಸರ್ಕಾರದ ಕೈವಾಡ ನಮ್ಮ ಸಾರ್ವಭೌಮತ್ವಕ್ಕೆ ಒಪ್ಪಿಕೊಳ್ಳಲಾಗದ ಅಪರಾಧವಾಗಿದೆ’ ಎಂದು ಹೇಳಿದ್ದರು. ಆದರೆ, ತಮ್ಮ ಆರೋಪಕ್ಕೆ ಯಾವುದೇ ದಾಖಲೆ ಒದಗಿಸಿರಲಿಲ್ಲ.
ಖಲಿಸ್ತಾನ್ ಟೈಗರ್ ಗುಂಪಿನ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು ಜೂನ್ 19, 2023ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಗುರುದ್ವಾರದ ಆವರಣದಲ್ಲಿ ಇಬ್ಬರು ಅಪರಿಚಿತ ಯುವಕರು ಗುಂಡಿಕ್ಕಿ ಕೊಂದಿದ್ದರು. ಭಾರತ ಸರ್ಕಾರ ಬಿಡುಗಡೆ ಮಾಡಿದ್ದ 10 ಭಯೋತ್ಪಾದಕರ ಪಟ್ಟಿಯಲ್ಲಿ ನಿಜ್ಜಾರ್ ಹೆಸರಿತ್ತು. 2022ರಲ್ಲಿ ಪಂಜಾಬ್ ನ ಜಲಂಧರ್ ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪ ಪ್ರಕರಣದಲ್ಲಿ, ನಿಜ್ಜಾರ್ ಕುರಿತು ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.