ನವದೆಹಲಿ : ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಎರಡು ದಿನ ರಾಷ್ಟ್ರ ರಾಜಧಾನಿಯಲ್ಲಿ ಬಾಕಿಯಾಗಿದ್ದರು. ಭಾನುವಾರ ದೆಹಲಿಯಿಂದ ಹೊರಡಬೇಕಿದ್ದ ಜಸ್ಟಿನ್ ಟ್ರುಡೊ ಅವರು, ಅಂತಿಮವಾಗಿ ಮಂಗಳವಾರ ಮಧ್ಯಾಹ್ನ ಸ್ವದೇಶಕ್ಕೆ ಹಾರಿದರು.
ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಹಾಗೂ ಇಡೀ ಕೆನಡಾದ ನಿಯೋಗ ಭಾರತದಲ್ಲಿ ಉಳಿಯುವಂತಾಗಿತ್ತು. ಪ್ರಧಾನ ಮಂತ್ರಿ, ಅವರ ನಿಯೋಗ ಮತ್ತು ಮಾಧ್ಯಮ ಪ್ರತಿನಿಧಿಗಳು ಭಾನುವಾರ ರಾತ್ರಿ ಕೆನಡಾಕ್ಕೆ ನಿರ್ಗಮಿಸಲು ಸಿದ್ಧವಾಗಿದ್ದರು. ಆದರೆ, ಹೊರಡುವ ಸ್ವಲ್ಪ ಸಮಯದ ಮುನ್ನ ಕೆನಡಾದ ಸಶಸ್ತ್ರ ಪಡೆಗಳು ವಿಮಾನದಲ್ಲಿ ತಾಂತ್ರಿಕ ಸಮಸ್ಯೆಯನ್ನು ಪತ್ತೆ ಹಚ್ಚಿತ್ತು. ಆ ಸಮಸ್ಯೆಯನ್ನು ರಾತ್ರೋರಾತ್ರಿ ಸರಿಪಡಿಸಲು ಸಾಧ್ಯವಾಗದ ಕಾರಣ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಎಲ್ಲರೂ ದೆಹಲಿಯಲ್ಲೇ ಉಳಿದಿದ್ದರು.
ಇದನ್ನೂ ಓದಿ : 2024ರ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ; ಪವನ್ ಕಲ್ಯಾಣ್ ಘೋಷಣೆ
ಕ್ಯಾನ್‌ಫೋರ್ಸ್ ಒನ್ (CANFORCE ONE) ಎಂದು ಕರೆಯಲ್ಪಡುವ ವಿಮಾನದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ಕೆನಡಾದ ಪ್ರಧಾನಿ ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳುವುದು ಇದೇ ಮೊದಲೇನಲ್ಲ. ಅವರು 2018 ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಸಮಯದಲ್ಲೂ ಹೀಗೆಯೇ ಆಗಿತ್ತು. ವಿಮಾನವು ರೋಮ್‌ನಲ್ಲಿ ಇಂಧನ ತುಂಬುವ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಟ್ರುಡೊ ಅವರು ಒಂದುವರೆಗಂಟೆಯಿಂದ ಮೂರು ಗಂಟೆಗಳವರೆಗೆ ರೋಮ್ ನಲ್ಲೇ ಸಿಲುಕಿಕೊಂಡಿದ್ದರು.
ಕೇವಲ ಕೆನಡಾ ಪ್ರಧಾನಿ ಮಾತ್ರವಲ್ಲದೆ ಇನ್ನೂ ಹಲವು ದೇಶಗಳ ಪ್ರಧಾನ ಮಂತ್ರಿಗಳು ಮತ್ತು ಇತರ ರಾಜಕೀಯ ನಾಯಕರು ವಿದೇಶಗಳಲ್ಲಿ ಸಿಲುಕಿಕೊಂಡ ಹಲವು ನಿದರ್ಶನಗಳಿವೆ.
ಜರ್ಮನಿ :
ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್ ಅವರು 2023ರ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವಾಗ 18 ಗಂಟೆಗಳಿಗೂ ಹೆಚ್ಚು ಕಾಲ ಯುಎಇಯ ರಾಜಧಾನಿ ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದರು. ಇಂಧನ ತುಂಬಲು ನಿಲ್ಲಿಸಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನ ಏರ್‌ಬಸ್ A340-300 ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
2018ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ಆಯೋಜಿಸಿದ್ದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಪ್ರಯಾಣಿಸುತ್ತಿದ್ದ ಜರ್ಮನ್ ಏರ್‌ಬಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆ, ಅವರು ಜರ್ಮನಿಯ ಕಲೋನ್‌ಗೆ ಹಿಂತಿರುಗಿದ್ದರು.
2019 ರಲ್ಲಿ, ಜರ್ಮನ್ ವಿದೇಶಾಂಗ ಸಚಿವ ಹೈಕೊ ಮಾಸ್ ಅವರು ತಮ್ಮ ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಸಿಲುಕಿಕೊಂಡಿದ್ದರು. ಅವರು ಪ್ರಯಾಣಿಸುತ್ತಿದ್ದ ವಿಮಾನ ಏರ್‌ಬಸ್ A319 ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು.
ನ್ಯೂಜಿಲ್ಯಾಂಡ್ :
ನ್ಯೂಜಿಲೆಂಡ್ ನ ರಾಜಕೀಯ ನಾಯಕರು ಬಳಸುವ ಬೋಯಿಂಗ್ 757 ಆಗಾಗ ತಾಂತ್ರಿಕ ದೋಷದಿಂದ ವಿದೇಶಗಳಲ್ಲಿ ಸಿಲುಕೊಳ್ಳುವುದು ಸಾಮಾನ್ಯ. ಹಾಗಾಗಿ, ಅಲ್ಲಿನ ಸೇನೆ 757 ವಿಮಾನದ ಜೊತೆಗೆ ಮತ್ತೊಂದು ಖಾಲಿ ವಿಮಾನ ಕಳುಹಿಸುತ್ತದೆ. ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಅವರು ಒಂದು ಬಾರಿ ಚೀನಾಗೆ ಪ್ರಯಾಣಿಸುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆ ವೇಳೆ ಸೇನೆ ಎರಡು ವಿಮಾನ ಕಳುಹಿಸಿತ್ತು.
ಪ್ರಧಾನ ಮಂತ್ರಿಯನ್ನು ಕರೆದೊಯ್ಯುವ ರಾಯಲ್ ನ್ಯೂಜಿಲೆಂಡ್ ಏರ್ ಫೋರ್ಸ್ ವಿಮಾನವು ಸುಮಾರು 30 ವರ್ಷ ಹಳೆಯದಾಗಿದ್ದು, 2030ರ ವೇಳೆಗೆ ಅದನ್ನು ಬದಲಾಯಿಸಲು ಸೇನೆ ನಿರ್ಧರಿಸಿದೆ.
ಅಕ್ಟೋಬರ್ 2022 ರಲ್ಲಿ, ಅಂಟಾರ್ಟಿಕಾಗೆ ಭೇಟಿ ನೀಡಿದ್ದ ಆಗಿನ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರ ವಿಮಾನವು ರನ್ವೇಯಲ್ಲಿ ತಾಂತ್ರಿಕ ಸಮಸ್ಯೆಗೆ ಒಳಗಾಗಿತ್ತು. ಇದರಿಂದ ಅವರು ಒಂದು ದಿನ ಹೆಚ್ಚುವರಿಯಾಗಿ ಅಂಟಾರ್ಟಿಕಾದಲ್ಲಿ ಉಳಿಯಬೇಕಾಯಿತು. 2016 ರಲ್ಲಿ, ಭಾರತಕ್ಕೆ ಪ್ರಯಾಣಿಸುತ್ತಿದ್ದ ಅಂದಿನ ಪ್ರಧಾನಿ ಜಾನ್ ಕೀ ಅವರು ಬ್ಯಾಕಪ್ ವಿಮಾನ ಕಳುಹಿಸುವವರೆಗೂ ಆಸ್ಟ್ರೇಲಿಯಾದಲ್ಲಿ ಸಿಲುಕಿಕೊಂಡಿದ್ದರು.
ಬೊಲಿವಿಯಾ :
ಯುಎಸ್ ರಾಷ್ಟ್ರೀಯ ಭದ್ರತಾ ಏಜೆನ್ಸಿಯ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ವಿಮಾನದಲ್ಲಿದ್ದಾರೆ ಎಂಬ ಸುಳ್ಳು ವದಂತಿ ಹರಡಿದ ಹಿನ್ನೆಲೆ ಬೊಲಿವಿಯನ್ ಅಧ್ಯಕ್ಷರ ವಿಮಾನ 2013 ರಲ್ಲಿ ಆಸ್ಟ್ರಿಯಾದಲ್ಲಿ ತುರ್ತು ಲ್ಯಾಂಡಿಂಗ್ ಆಗಿತ್ತು.
ಬೋಲಿವಿಯಾದ ಅಧ್ಯಕ್ಷ ಇವೊ ಮೊರೇಲ್ಸ್ ಮಾಸ್ಕೋದಿಂದ ಬೊಲಿವಿಯಾಕ್ಕೆ ಹಿಂದಿರುಗುತ್ತಿದ್ದ ವೇಳೆ ಪೋರ್ಚುಗೀಸ್ ಮತ್ತು ಫ್ರೆಂಚ್ ಅಧಿಕಾರಿಗಳು ಇಂಧನ ತುಂಬಿಸಲು ಅನುಮತಿಸಿರಲಿಲ್ಲ. ಕೊನೆಯದಾಗಿ ಅವರು ಆಸ್ಟ್ರಿಯಾದಲ್ಲಿ ಇಳಿಯಬೇಕಾದ ಪರಿಸ್ಥಿತಿ ಬಂದಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.