ನವದೆಹಲಿ: ಪತ್ರಕರ್ತರಿಗೆ ಒಂದು ಲಕ್ಷ ರೂಪಾಯಿ ಲಂಚ ನೀಡಿದ್ದು, ಪತ್ರಕರ್ತರಿಗೆ ಲಂಚ ನೀಡಲು ಹಣ ಎಲ್ಲಿಂದ ಬಂತು? ಸಿಎಂ ಬೊಮ್ಮಾಯಿ ಲಂಚಾವತಾರ ಬಯಲಾಗಿದೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭಾರತದಲ್ಲಿ ಕರ್ನಾಟಕವೇ ಅತಿ ದೊಡ್ಡ ಭ್ರಷ್ಟಾಚಾರ ಸರ್ಕಾರ. ನೇಮಕಾತಿಯಲ್ಲಿ, ಗುತ್ತಿಗೆಯಲ್ಲಿ, ವರ್ಗಾವಣೆಯಲ್ಲಿ ಎಲ್ಲ ಕಡೆ ಸಿಎಂ ಕಚೇರಿ ಲಂಚ ಪಡೆಯುತ್ತಿದೆ. 40% ಕಮಿಷನ್ ಪಡೆದು ಕೆಲಸ ಮಾಡುತ್ತಿದೆ. ಮಠಗಳಿಗೂ ಅನುದಾನ ನೀಡುವಲ್ಲೂ ಸರ್ಕಾರ ಕಮಿಷನ್ ಪಡೆದಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ರಾಜ್ಯದ ಕೆಲವು ಆಯ್ದ ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ ಸಿಹಿತಿಂಡಿಗಳ ಜೊತೆಗೆ ತಲಾ 2.5 ಲಕ್ಷ ರೂಪಾಯಿ ನಗದು ನೀಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಸಿಎಂ ಬೊಮ್ಮಾಯಿ ಲಂಚಾವತಾರ ಬಯಲಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ಲಕ್ಷ ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು 40 ಪರ್ಸೆಂಟ್ ಕಮಿಷನ್‌ನಲ್ಲಿ ನೀಡಿದ ಹಣವೇ?, 40 ಪರ್ಸೆಂಟ್ ಕಮಿಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ? ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಆ ‘ಲಂಚ’ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.