ಬೆಂಗಳೂರು: ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ದ ಆದೇಶದಂತೆ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ಡಿಎಂಕೆ ಪಕ್ಷವನ್ನು ಸಂತೃಪ್ತಿಗೊಳಿಸಲು ರಾಜ್ಯದ ಹಿತವನ್ನು ಕಾಂಗ್ರೆಸ್ ಬಲಿ ಕೊಡುತ್ತಿದೆ; ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟಿದ್ದ ಕಾಂಗ್ರೆಸ್, ಅದೇ ರೀತಿಯಲ್ಲಿಯೇ, ರಾಜ್ಯದ ಹಿತಾಸಕ್ತಿಯನ್ನು ಕರ್ನಾಟಕ ಕಾಂಗ್ರೆಸ್ ಬಲಿ ಕೊಡುತ್ತಿದೆ’ ಎಂದು ಟೀಕಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಅಧಿಕಾರದಲ್ಲಿದ್ದಾಗ ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟಿದ್ದ ಕಾಂಗ್ರೆಸ್ ರೀತಿಯಲ್ಲಿಯೇ, ರಾಜ್ಯದ ಹಿತಾಸಕ್ತಿಯನ್ನು ಕರ್ನಾಟಕ ಕಾಂಗ್ರೆಸ್ ಬಲಿ ಕೊಡುತ್ತಿದೆ. ಅಧಿಕಾರದ ಲಾಲಸೆಗಾಗಿ ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ರಾಜಿಯಾದ ಮಾದರಿಯಲ್ಲಿ, ಈಗ ಕರ್ನಾಟಕ ಕಾಂಗ್ರೆಸ್ ರಾಜ್ಯದ ನೆಲ, ಜಲದ ವಿಷಯದಲ್ಲಿ ಯಾವುದೇ ಪ್ರತಿರೋಧ ತೋರದೆ ರಾಜಿಯಾಗುತ್ತಿದೆ’ ಎಂದು ಕಿಡಿಕಾರಿದೆ.
ಇದನ್ನೂ ಓದಿ; ಕಾವೇರಿ ನದಿನೀರು ಹಂಚಿಕೆ ವಿವಾದ; ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಒಪ್ಪಿಗೆ
‘ಕಾವೇರಿ ನೀರಿನ ವಿವಾದದ ಬಗ್ಗೆ ಕಾವೇರಿ ನ್ಯಾಯಾಧಿಕರಣವು ಜಲಾಶಯದ ನೀರಿನ ಬಳಕೆಯ ಬಗ್ಗೆ ಈಗಾಗಲೇ ಆದೇಶ ನೀಡಿದೆ. ತಮಿಳುನಾಡಿನಲ್ಲಿ ಬೆಳೆಯುವ 1 ಲಕ್ಷ 80 ಸಾವಿರ ಹೆಕ್ಟೇರ್ ಕುರುವೈ ಬೆಳೆಗೆ, ಒಟ್ಟು 32 ಟಿಎಂಸಿ ನೀರು ಬಿಡಬೇಕೆಂಬ ಅಂಶ ಆದೇಶದಲ್ಲಿದೆ. ಆದರೆ, ಈ ಬಾರಿ ತಮಿಳುನಾಡಿನಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರುವೈ ಬೆಳೆಯನ್ನು ಬೆಳೆಯುತ್ತಿದ್ದು, ಇದಕ್ಕಾಗಿ ಈಗಾಗಲೇ ಒಟ್ಟು 60 ಟಿಎಂಸಿ ನೀರು ಬಳಕೆಯಾಗಿದೆ’ ಎಂದು ಬಿಜೆಪಿ ವಿವರಿಸಿದೆ.
‘ತಮಿಳುನಾಡು ಸರ್ಕಾರ ತಮಗೆ 10 ಟಿಎಂಸಿ ನೀರು ಬಿಡಿ ಎಂದು ಪ್ರಾಧಿಕಾರದ ಮುಂದೆ ಹೇಳಿದಾಗ, ರಾಜ್ಯ ಸರ್ಕಾರದ ಅಧಿಕಾರಿಗಳು ಈ ಅಂಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ, ಅಂಕಿ ಅಂಶಗಳ ಸಮೇತ ಮಂಡಿಸಬೇಕಿತ್ತು. ಆದರೆ, ಈ ಯಾವ ಅಂಶಗಳನ್ನೂ ಪ್ರಸ್ತಾಪಿಸದೆ ಮೌನಕ್ಕೆ ಶರಣಾಗಿದ್ದು ಏಕೆ..? ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ, ತಮಿಳುನಾಡಿಗೆ ನೀರು ಬಿಡಲು, ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ವಿರೋಧ ವ್ಯಕ್ತಪಡಿಸದೇ ಮುಂದಾಗಿರುವುದರ ಹಿಂದಿನ ಅಸಲಿ ಸತ್ಯವಾದರೂ ಏನು’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ; ಕಾವೇರಿ ನೀರು ವಿವಾದ ಅರ್ಜಿ ಮುಂದಿನ ವಾರ ವಿಚಾರಣೆ; ರಾಜ್ಯ ಪರ ವಕೀಲ ಮೋಹನ್ ಕಾತರಕಿ
‘ವಿಪರ್ಯಾಸವೆಂದರೆ ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವೋಟು ಹಾಕಿದ ಮತದಾರನಿಗೆ ಕಾಂಗ್ರೆಸ್ ಸರ್ಕಾರ ಈಗ ಬಳುವಳಿ ಎಂಬಂತೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ರಾಜ್ಯದ ಕಾಂಗ್ರೆಸ್ ಪಕ್ಷಕ್ಕೂ, ತಮಿಳುನಾಡಿನ ಡಿ.ಎಂ.ಕೆಗೂ ಎಂತಹ ಸಹೋದರ ಸಂಬಂಧವಿದ್ದರೂ, ಅದನ್ನು ರಾಜ್ಯದ ಜನರ ಹಿತ ಕಾಪಾಡಲು ಬಳಸಬೇಕಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಮಿತ್ರ ಡಿ.ಎಂ.ಕೆ ಪಕ್ಷವನ್ನು ಸಂತೃಪ್ತಿಗೊಳಿಸಲು ರಾಜ್ಯದ ಹಿತವನ್ನು ಬಲಿ ಕೊಡುತ್ತಿದೆ. ರೈತರ ಕನಸುಗಳಿಗೆ ಬೆಂಕಿ ಇಡುತ್ತಿದೆ. ಇದು ನಾಡದ್ರೋಹದ ಕೆಲಸ. ರಾಜ್ಯದ ನೆಲ-ಜಲದ ಹಿತವನ್ನು ಕಾಪಾಡಲು ಅರ್ಹತೆಯಿಲ್ಲದ ನಾಡದ್ರೋಹಿ ಕಾಂಗ್ರೆಸ್, ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯಲು ಅನರ್ಹ’ ಎಂದು ಟ್ವೀಟ್ ಮಾಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.