ಬೆಂಗಳೂರು : ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ಜಲ ವಿವಾದ ಉಂಟಾಗಿರುವ ಹಿನ್ನೆಲೆ, ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯೂಆರ್ ಸಿ) ಇಂದು ಮಹತ್ವದ ಸಭೆ ಕರೆದಿದೆ. ಎಲ್ಲರ ಚಿತ್ತ ಸಭೆಯತ್ತ ನೆಟ್ಟಿದೆ.
ಕಳೆದ ಆಗಸ್ಟ್ 29ರಂದು ಸಭೆ ನಡೆಸಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಮುಂದಿನ 15 ದಿನಗಳಲ್ಲಿ (ಸೆಪ್ಟೆಂಬರ್ 12ರವರೆಗೆ) 75 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ಪ್ರಾಧಿಕಾರದ ಸೂಚನೆಯಂತೆ ಸೆಪ್ಟೆಂಬರ್ 8ರವರೆಗೆ ಕರ್ನಾಟಕ ಸರ್ಕಾರ ತಮಿಳುನಾಡಿಗೆ 62 ಸಾವಿರ ಕ್ಯೂಸೆಕ್ ನೀರು ಕೆಆರ್ ಎಸ್ ಡ್ಯಾಂನಿಂದ ಬಿಟ್ಟಿದೆ. ಬಳಿಕ ಪ್ರಾಧಿಕಾರ ಸೂಚಿಸಿದ ಕೋಟಾ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆ ಸರ್ಕಾರ ನೀರು ಬಿಡುವುದನ್ನು ಸ್ಥಗಿತಗೊಳಿಸಿದೆ.
ಇದನ್ನೂ ಓದಿ : ಗ್ಯಾರಂಟಿಗಳಿಂದ ಬರಗಾಲ ಘೋಷಣೆ ವಿಳಂಬ : ಶಾಸಕ ಐಹೊಳೆ ಅಸಮಾಧಾನ
ರೈತರ ಮತ್ತು ವಿಪಕ್ಷಗಳ ವಿರೋಧವನ್ನು ಲೆಕ್ಕಿಸದೆ ಕಾವೇರಿ ಪ್ರಾಧಿಕಾರದ ಸೂಚನೆಯಂತೆ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ಹಾಗಾಗಿ, ನಾವು ಪ್ರಾಧಿಕಾರ ಹೇಳಿದಂತೆ ನೀರು ಬಿಟ್ಟಿದ್ದೇವೆ ಎಂದು ಕರ್ನಾಟಕ ಪ್ರಾಧಿಕಾರಕ್ಕೆ ತಿಳಿಸಿದೆ. ಅತ್ತ ತಮಿಳುನಾಡು ಕರ್ನಾಟಕ ಸರ್ಕಾರ ಸರಿಯಾಗಿ ನೀರು ಹರಿಸಿಲ್ಲ. ನಮಗೆ ಇನ್ನೂ ನೀರು ಬರಬೇಕಿದೆ ಎಂಬ ವಾದ ಮುಂದಿಟ್ಟಿದೆ. ಈ ನಡುವೆ ಇಂದು ಸಿಡಬ್ಲ್ಯೂಆರ್ ಸಿ ಸಭೆ ಕರೆದಿದ್ದು, ಯಾರ ಪರ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ್ದರೂ, ಮಂಡ್ಯದ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದವು. ಇಂದು ಸಿಡಬ್ಲ್ಯೂಆರ್ ಸಿ ಸಭೆ ಹಿನ್ನೆಲೆ, ನಿನ್ನೆಯಷ್ಟೇ (ಸೆ.11) ರೈತ ಸಂಘಟನೆಗಳು ಪ್ರತಿಭಟನೆ ಹಿಂಪಡೆದಿವೆ. ಇಂದಿನ ಸಭೆಯ ನಿರ್ಣಯಗಳನ್ನು ನೋಡಿಕೊಂಡು ಮುಂದಿನ ಹೋರಾಟ ರೂಪಿಸುವುದಾಗಿ ಹೇಳಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.