ಬೆಂಗಳೂರು: ಕಾವೇರಿ ನದಿ ನೀರು ಬಿಡುಗಡೆ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಇಂದು ವಿಚಾರಣೆ ಕೈಗೆತ್ತಿಕೊಂಡಿದ್ದ ತ್ರಿಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಈ ನಡುವೆ CWMA (ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ) ಸಭೆ ನಡೆಸುವಂತೆ ಸೂಚಿಸಿದೆ. ಈ ಸಭೆಯಲ್ಲಿ ವಾಸ್ತವಾಂಶ ಚರ್ಚಿಸಿ ವರದಿ ಸಲ್ಲಿಸುವಂತೆ ಉಭಯ ಕಕ್ಷೀದಾರರಿಗೆ ತಿಳಿಸಿದೆ. ಈ ಹಿನ್ನೆಲೆ ಸೋಮವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಿದೆ.
ಇದನ್ನೂ ಓದಿ: ‘ಕಾಂಗ್ರೆಸ್ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ’
ತಮಿಳುನಾಡು ವಾದವೇನು?
ನದಿ ನೀರು ಹಂಚಿಕೆಯಲ್ಲಿ ಬಾಕಿ ಉಳಿದಿರುವ ನೀರಿನಲ್ಲಿ ಆಗಸ್ಟ್ ತಿಂಗಳಲ್ಲಿ 24 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕು. ಬಿಳಿಗುಂಡ್ಲು ಅಣೆಕಟ್ಟಿನಿಂದ ತಕ್ಷಣವೇ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಕಾವೇರಿ ನ್ಯಾಯಮಂಡಳಿ ತೀರ್ಪು ಪ್ರಕಾರ 2023ರ ಸೆಪ್ಟೆಂಬರ್ ವೇಳೆಗೆ ನಿಗದಿತ 36.76 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ನಿರ್ದೇಶಿಸಲೂ ತಮಿಳುನಾಡು ಸರ್ಕಾರ ಒತ್ತಾಯಿಸುತ್ತಿದೆ.
ಅಫಿಡವಿಟ್ ಸಲ್ಲಿಸಿದ ಕರ್ನಾಟಕ
ಇನ್ನೊಂದೆಡೆ ತಮಿಳುನಾಡಿಗೆ ನೀರು ಬಿಡುವ ಸಂಬಂಧ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಕರ್ನಾಟಕದ ಜಲಾಶಯಗಳಿಂದ ದಿನಕ್ಕೆ 24,000 ಕ್ಯೂಸೆಕ್ ನೀರು ಬಿಡುಗಡೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯು ಸಾಮಾನ್ಯ ನೀರಿನ ವರ್ಷ ಎಂಬ ಊಹೆಯನ್ನು ಆಧರಿಸಿದೆ. ತಮಿಳುನಾಡಿನ ಅರ್ಜಿಯು ಈ ಜಲ ವರ್ಷ ಸಾಮಾನ್ಯವಾಗಿದೆ ಮತ್ತು ಸಂಕಷ್ಟದ ವರ್ಷವಲ್ಲ ಎಂಬ ತಪ್ಪು ಕಲ್ಪನೆಯನ್ನು ಆಧರಿಸಿದೆ. ಇದೇ ವೇಳೆ ಶೇ. 25ರಷ್ಟು ಮಳೆ ಕೊರತೆಯಾಗಿದೆ. ಈ ಆಧಾರದ ಮೇಲೆ ತಮಿಳುನಾಡು ಸಲ್ಲಿಸಿರುವ ಅರ್ಜಿ ವಜಾಗೊಳಿಸಲು ಅರ್ಹವಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.