ಮಂಡ್ಯ: ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ಜಿಲ್ಲೆಯ ಕೃಷ್ಣರಾಜ ಸಾಗರ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಯುತ್ತಲೇ ಇದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಮೇರೆಗೆ ಪ್ರತಿನಿತ್ಯ 12,631 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಮಳೆ ಕೊರತೆಯಿಂದ ಕೆಆರ್‌ಎಸ್ ಡ್ಯಾಂನ ಒಳ ಹರಿವು ಕಡಿಮೆಯಾಗಿದ್ದು, ನಿರಂತರ ಹೊರ ಹರಿವಿನಿಂದ ಡ್ಯಾಂನ ನೀರಿನ ಮಟ್ಟದಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಒಟ್ಟಾರೆ ನೀರಿನ ಮಟ್ಟ 105 ಅಡಿಗೆ ಕುಸಿತ ಕಂಡಿದೆ. ಡ್ಯಾಂ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ. ಇದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಕೆಆರ್‌ಎಸ್ ಒಡಲು ಬರಿದಾಗುವ ಆತಂಕ ಎದುರಾಗಿದೆ.
ಮಂಡ್ಯ ಜಿಲ್ಲೆಯ ಅನ್ನದಾತರ ಮಾತಿಗೆ ಸೊಪ್ಪು ಹಾಕದ ರಾಜ್ಯ ಸರ್ಕಾರ, ನೀರು ಹರಿಸುವುದನ್ನು ಮುಂದುವರಿಸಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವಡೆ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿವೆ.
ಇದನ್ನೂ ಓದಿ; ಮಂಡ್ಯ; ಹೆದ್ದಾರಿಯಿಂದ ಸಂಜಯ್ ವೃತ್ತಕ್ಕೆ ಶಿಫ್ಟ್ ಆಗಿದ್ಯಾಕೆ ಬಿಜೆಪಿ ಪ್ರತಿಭಟನೆ?
ಹೋರಾಟದ ನಡುವೆಯು ನಿನ್ನೆ ತಮಿಳುನಾಡಿಗೆ 12,631 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಡ್ಯಾಂನಿ 15247 ಕ್ಯೂಸೆಕ್ ಹೊರಹರಿವು ಆಗುತ್ತಿದೆ. ಹೊರ ಹರಿವು ಹೆಚ್ಚಾಗಿದ್ದರೂ ಡ್ಯಾಂನ ಒಳಹರಿವಿನಲ್ಲಿ ಸಾಕಷ್ಟು ಕಡಿಮೆಯಾಗಿದೆ. ಕೇವಲ 4983 ಕ್ಯೂಸೆಕ್ ನೀರು ಮಾತ್ರ ಡ್ಯಾಂಗೆ ಹರಿದುಬರುತ್ತಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 105.70 ಅಡಿ ಮಾತ್ರ ನೀರು ಸಂಗ್ರಹವಾಗಿದೆ. 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 27.617 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ.
ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 105.70 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 27.617 ಟಿಎಂಸಿ
ಒಳ ಹರಿವು – 4983 ಕ್ಯೂಸೆಕ್
ಹೊರ ಹರಿವು – 15,247 ಕ್ಯೂಸೆಕ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.