ಬೆಂಗಳೂರು: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಬಾರದೇ ಇರುವುದರಿಂದ ಹಲವು ಡ್ಯಾಂಗಳಲ್ಲಿನ ನೀರಿನ ಶೇಖರಣೆ ಕುಸಿತವಾಗಿದೆ. ಕಾವೇರಿ ಕೊಳ್ಳದಲ್ಲಿಯೂ ಮಳೆ ಕೈಕೊಟ್ಟಿದ್ದು ಮಂಡ್ಯದ ಕೃಷ್ಣರಾಜ ಸಾಗರ ಡ್ಯಾಂನಲ್ಲಿ ನೀರಿನ ಶೇಖರಣೆ ಸಾಕಷ್ಟು ಕುಸಿತ ಕಂಡಿದ್ದು, ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡಿ ಬೇಡಿಕೆ ಇಟ್ಟಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆ ಮೇರೆಗೆ ಒಂದು ವಾರಗಳ ಕಾಲ ತಮಿಳುನಾಡಿಗೆ ನೀರು ಹರಿಸಿದ್ದ ರಾಜ್ಯ ಸರ್ಕಾರಕ್ಕೆ, ಇದೀಗ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಸರ್ವ ಪಕ್ಷಗಳ ಸಭೆ ನಡೆಯುತ್ತಿದ್ದು, ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿರುವ ಹಲವು ಕೇಂದ್ರ ಸಚಿವರು ಸಭೆಗೆ ಗೈರಾಗಿದ್ದಾರೆ.
ಇದನ್ನೂ ಓದಿ; ಚಂದ್ರಯಾನ-3: ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ಗಣ್ಯರಿಂದ ಶುಭ ಹಾರೈಕೆ
ಸಭೆಗೂ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನಾವೀಗ ನಮ್ಮ ರಾಜ್ಯದ ಹಿತ ಕಾಪಾಡಬೇಕು; ಸದ್ಯಕ್ಕೆ ನಮಗೆ ನೀರು ಕಡಿಮೆ ಇದೆ. ಹೀಗಾಗಿ, ತನಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠ ರಚಿಸಿದ್ದಾರೆ. ನಮ್ಮ ವಾದ ಏನು ಇರಬೇಕು ಅಂತ ಚರ್ಚೆ ಮಾಡ್ತೀವಿ. ರಾಜಕಾರಣ ಬದಿಗೊತ್ತಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡ್ತೀವಿ’ ಎಂದು ಹೇಳಿದರು.
ಕೇಂದ್ರ ಸಚಿವರು ಗೈರು!
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಕಾವೇರಿ ಜಲ ವಿವಾದದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಿರ್ಮಲಾ ಸೀತಾರಾನ್, ಎ ನಾರಾಯಣ ಸ್ವಾಮಿ ಹಾಗೂ ರಾಜೀವ್ ಚಂದ್ರಶೇಖರ್ ಗೈರಾಗಿದ್ದಾರೆ. ರಾಜ್ಯ ಬಿಜೆಪಿ ಮುಖಂಡರಾದ ಬಿ. ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದಗೌಡ, ಜೆಡಿಎಸ್ ಮುಖಂಡರಾದ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ವಿವಿಧ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.