ಬೆಂಗಳೂರು: ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಅವರೂ ಧ್ವನಿ ಎತ್ತಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ‘ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗ್ತಾಯಿರೋದು ರಾಜಕೀಯಕ್ಕಾಗಿ’ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ‘ಅವರಿಗೆ ರಾಜ್ಯದ ಹಿತ ಕಾಪಾಡಬೇಕೆಂಬ ಕಾಳಜಿ ಇದ್ದರೆ ನಮಗೆ ಎಲ್ಲ ರೀತಿಯ ಸಹಕಾರ ನೀಡಲಿ. ರಾಜ್ಯದ ಹಿತಾಸಕ್ತಿಗಾಗಿ ಅವರು ಬಂದು ಧ್ವನಿ ಎತ್ತಲಿ’ ಎಂದು ಹೇಳಿದರು.
ಇದನ್ನೂ ಓದಿ; ಆರ್. ಅಶೋಕ್‌ಗೆ ಬುದ್ದಿ ಭ್ರಮಣೆ ಆಗಿರಬೇಕು; ಡಿ.ಕೆ. ಶಿವಕುಮಾರ್‌ಗೆ ವಾಗ್ದಾಳಿ!
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಡಿಕೆಶಿ, ‘ಇಲ್ಲದಿದ್ದರೆ ನಮ್ಮ ಕೆಲಸ ನಾವು ಮಾಡುತ್ತೇವೆ. ಶೋಭಾ ಅವರವನ್ನೂ ಕೂಡ ಸರ್ವಪಕ್ಷ ಮುಖಂಡರ ಸಭೆಗೆ ಕರೆದಿದ್ದೆವು; ಪಾಪ ಅವರಿಗೆ ಸಭೆಗೆ ಬರಲು ಸಮಯ ಇರಲಿಲ್ಲ ಬಂದಿಲ್ಲ. ನಮಗೆ ಪ್ರಧಾನಮಂತ್ರಿ ಮೋದಿಯವರು ಸಮಯ ಕೊಟ್ಟಾಗ, ಅವರ ಮುಂದೆ ನಮ್ಮ ವಾದ ಮಂಡಿಸುತ್ತೇವೆ. ನಾವು ಈ ವಿಚಾರದಲ್ಲಿ ರೈತರ ಹಿತ ಕಾಪಾಡಬೇಕು; ನ್ಯಾಯಾಲಯಕ್ಕೂ ಗೌರವ ಕೊಡಬೇಕು’ ಎಂದರು.
‘ಕಾವೇರಿ ನೀರು ಹಂಚಿಕೆ ಸಂಬಂಧ ಕಾನೂನು ತಜ್ಞರ ಜೊತೆ ಸಭೆ ಮಾಡಿದ್ದೇವೆ; ಈಗಾಗಲೇ ನಮ್ಮ ಅಡ್ವೋಕೇಟ್ ಜನರಲ್ ದೆಹಲಿಗೆ ಹೋಗಿದ್ದಾರೆ. ನಾನೂ ಕೂಡ ಇನ್ನೊಂದು ಸಭೆ ಮಾಡೋದಿದೆ’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ‘ಇಡೀ ಟೀಮ್ ಬದಲಾಗುತ್ತೆ; ಕಾರ್ಯಾಧ್ಯಕ್ಷರಾಗಿರುವ ಕೆಲವರು ಸಚಿವರಾಗಿದ್ದಾರೆ. ಹೊಸಬರಿಗೆ ಅವಕಾಶ ಕೊಡಬೇಕು ಅಂದುಕೊಂಡಿದ್ದೇವೆ’ ಎಂದು ಡಿಕೆಶಿ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.