ನವದೆಹಲಿ: ಕಾವೇರಿ ನೀರಿಗಾಗಿ ಇಂದು ಇಡೀ ಕರ್ನಾಟಕ ಸ್ತಬ್ಧವಾಗಿದೆ. ಬಂದ್ ದಿನವಾದ ಇಂದೇ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆ ನಡೆದಿದ್ದು, ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಆದೇಶಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಇತ್ತೀಚೆಗೆ ನೀಡಿದ್ದ ಆದೇಶವನ್ನೇ ಅಕ್ಟೋಬರ್ 15ರವರೆಗೆ ಮುಂದುವರಿಸುವಂತೆ ಪ್ರಾಧಿಕಾರ ಸೂಚಿಸಿದೆ. ಅದರಂತೆ ಪ್ರತಿದಿನವೂ 3,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಹೇಳಿದೆ.
ಪ್ರಾಧಿಕಾರರ ಮುಂದೆ ವಾದ ಮಂಡಿಸಿದ ಕರ್ನಾಟಕದ ಅಧಿಕಾರಿಗಳು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಅಸಾಧ್ಯ, ಈಗಾಗಲೇ ಕರ್ನಾಟಕದಲ್ಲಿ ಸರಣಿ ಬಂದ್ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ನೀರು ಬಿಡಲು ಆಗುವುದಿಲ್ಲ ಎಂದರು.
ರಾಜ್ಯದಲ್ಲಿ ನೀರಿನ ಕೊರತೆ ಇದೆ. ಈಗಾಗಲೇ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪಾಲಿಸಿದೆ. ಇದಾಗಿಯೂ ಮತ್ತಷ್ಟು ನೀರು ಬಿಡಲು ಸಾಧ್ಯವೇ ಇಲ್ಲ. ಕರ್ನಾಟಕ ಕುಡಿಯುವ ನೀರಿಗಾಗಿ ಹೋರಾಡುತ್ತಿದ್ದರೆ, ತಮಿಳುನಾಡು ಕೃಷಿಗಾಗಿ ನೀರು ಕೇಳುತ್ತಿದೆ. ಈಗಿನ ಅಗತ್ಯತೆಯನ್ನು ನೀವೇ ಪರಿಶೀಲಿಸಿ ಎಂದು ಹೇಳಿದರು.
ಮತ್ತೊಂದೆಡೆ ತಮಿಳುನಾಡಿನ ಅಧಿಕಾರಿಗಳೂ ಸಹ ನಮಗೆ ನೀರು ಸಾಕಾಗುತ್ತಿಲ್ಲ, ಈಗ ಹರಿಸುತ್ತಿರುವ ನೀರಿನ ಪ್ರಮಾಣದಿಂದ ಪ್ರಯೋಜನವಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಬೇಕು ಎಂದು ಪಟ್ಟುಹಿಡಿದರು. ನಮಗೆ ಅಕ್ಟೋಬರ್ ತಿಂಗಳ ನೀರನ್ನೂ ಬಿಡಿ ಎಂದು ವಾದಿಸಿದರು.