ನವದೆಹಲಿ: ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದೆ. ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತಿದ್ದು, ಸಿಂಗಾಪುರದಲ್ಲಿರುವ ರೋಹಿಣಿ ಆಚಾರ್ಯ ಬೇಸರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಗೆ “ಕಿರುಕುಳ” ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. “ಇವರು ನಮ್ಮ ತಂದೆಗೆ ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳದಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಯಾದರೆ, ನಾವು ದೆಹಲಿಯ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸುತ್ತೇವೆ. ತಾಳ್ಮೆ ಮೀರುತ್ತಿದೆ” ಎಂದು ರೋಹಿಣಿ ಆಚಾರ್ಯ ಟ್ವೀಟ್ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಿದ್ದೇವೆ ಎಂದು ಕೇಂದ್ರ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದರು. ಭೂಮಿಯನ್ನು ಕೊಡುಗೆಯಾಗಿ ನೀಡುವಿಕೆ ಅಥವಾ ಕಡಿಮೆ ದರದಲ್ಲಿ ಭೂ ಮಾರಾಟ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಿದ ಆರೋಪದಲ್ಲಿ ಲಾಲೂ ಪ್ರಸಾದ್ ಕುಟುಂಬ ಮತ್ತು ಇತರ 14 ಮಂದಿಯನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಕಳೆದ ವರ್ಷ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದು, ಒಂದು ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದರು.