ಬೆಂಗಳೂರು : ಚೈತ್ರಾ ಕುಂದಾಪುರ ಮತ್ತು ತಂಡದ ಮೇಲಿನ ಬಹುಕೋಟಿ ವಂಚನೆ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆದಕಿದಷ್ಟು ಬೆಚ್ಚಿ ಬೀಳಿಸುವ ವಿಷಯಗಳು ಹೊರಬರುತ್ತಿವೆ.
ಇತ್ತೀಚಿನ ಮಾಹಿತಿ ಪ್ರಕಾರ, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಹಲವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಇನ್ನೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಪೋನ್ ಮೂಲಕ ಮೌಖಿಕ ಸೂಚನೆ ನೀಡಿದೆ.
ಭಜರಂಗದಳ, ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ), ಹಿಂದೂ ಜಾಗರಣೆ ವೇದಿಕೆಯ ಮುಖಂಡರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಿಂದುತ್ವ ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಮುಖವಾಗಿ ಅವದೂತ ವಿನಯ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಪೊಲಿಟಿಕಲ್ 360ಗೆ ಲಭ್ಯವಾಗಿದೆ.
ಆರಂಭದಲ್ಲಿ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ಮೂವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಈ ಪ್ರಕರಣದಲ್ಲಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಹಾಲಶ್ರೀ ಹೆಸರು ಕೇಳಿ ಬಂದಿತ್ತು. ಹಾಲಶ್ರೀಯನ್ನು ಬಂಧಿಸಿದರೆ ಸತ್ಯ ಹೊರ ಬರಲಿದೆ ಎಂದು ಸ್ವತಃ ಚೈತ್ರಾ ಕುಂದಾಪುರ ಹೇಳಿದ್ದರು. ಯುವ ಬ್ರಿಗೇಡ್ ಮುಖ್ಯಸ್ಥ, ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತು ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಕೂಡ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಆದರೆ, ಇವರಿಬ್ಬರ ಮೇಲೆ ಯಾವುದೇ ಆರೋಪ ರುಜುವಾತಾಗಿಲ್ಲ.
ಈ ನಡುವೆ ವಿನಯ್ ಗುರೂಜಿ ಮತ್ತು ಹಿಂದುತ್ವ ಸಂಘಟನೆಗಳಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿರುವುದು, ಪ್ರಕರಣ ಹಿಂದೆ ಚೈತ್ರಾ ಮತ್ತು ಆಕೆಯ ತಂಡ ಮಾತ್ರವಲ್ಲದೆ ದೊಡ್ಡದೊಂದು ಜಾಲವೇ ಇದೆ ಎಂಬ ಸುಳಿವು ನೀಡಿದೆ.
ವರದಿ : ಮಹೇಶ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.