ಬಾಗಲಕೋಟೆ : ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಮತ್ತು ತಂಡಕ್ಕೆ ಸೇರಿದ ಕಾರು, ಹಣ ಮತ್ತು ಚಿನ್ನಾಭರಣವನ್ನು ಸಿಸಿಬಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕಿರಣ್ ಗನಪ್ಪಗೋಳ ಎಂಬವರಿಗೆ ಸೇರಿದ ಮನೆಯಲ್ಲಿ ಚೈತ್ರಾ ಕುಂದಾಪುರ ಕಾರು ನಿಲ್ಲಿಸಿದ್ದರು. ಸೆಪ್ಟೆಂಬರ್ 9ರಂದು ಮುಧೋಳಕ್ಕೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ್ದ ಚೈತ್ರಾ, ಹಿಂದೂ ಕಾರ್ಯಕರ್ತ ಕಿರಣ್ ಮನೆಯಲ್ಲಿ ಕೆಎ-20 ಎಂಇ-7253 ನೋಂದಣಿಯ ಕಿಯಾ ಕಾರನ್ನು ನಿಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಅಧಿಕಾರಿಗಳು ಕಾರು ವಶಕ್ಕೆ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಅವರ ಕಾರು ಪತ್ತೆಯಾದ ಮನೆಯ ಮಾಲೀಕ ಕಿರಣ್ ಗನಪ್ಪಗೋಳ ಸ್ವಂತ ಡ್ರೈವಿಂಗ್ ಸ್ಕೂಲ್ ಹೊಂದಿದ್ದ. ಈತ ಚೈತ್ರಾ ಕುಂದಾಪುರಗೆ ಮೊದಲಿನಿಂದಲೂ ಪರಿಚಯ ಇದ್ದ ಎಂದು ತಿಳಿದು ಬಂದಿದೆ. ಹಾಗಾಗಿ, ವಂಚನೆ ಪ್ರಕರಣದಲ್ಲಿ ಕಿರಣ್ ಪಾತ್ರ ಏನಾದರು ಇದೆಯಾ? ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ.
ಹಣ, ಚಿನ್ನಾಭರಣ ವಶಕ್ಕೆ : ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಚೈತ್ರಾ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ 1 ಕೋಟಿ 8 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಚೈತ್ರಾಳ ಬಾವ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಅವರ ಸಹಾಯದಿಂದ ಹಣ ಠೇವಣಿ ಇಟ್ಟಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೆ, ಚೈತ್ರಾಳ ಮನೆಯಲ್ಲಿದ್ದ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : ಚೈತ್ರಾ ಕುಂದಾಪುರ ವಂಚನೆ ಕೇಸ್; ಕುಂದಾಪುರ- ಬ್ರಹ್ಮಾವರದಲ್ಲಿ ಸ್ಥಳ ಮಹಜರ್
ವಂಚನೆ ಪ್ರಕರಣದ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ಮನೆಯಲ್ಲೂ 45 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಚೈತ್ರಾಳ ಸ್ನೇಹಿತನಾಗಿರುವ ಶ್ರೀಕಾಂತ್ ಮನೆಯಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದಾಗ 45 ಲಕ್ಷ ರೂಪಾಯಿ ಹಣ ದೊರೆತಿದೆ.
ಗೋವಿಂದ ಪೂಜಾರಿ ಚೈತ್ರಾ ತಂಡಕ್ಕೆ ಹಣ ವರ್ಗಾಯಿಸಿದ್ದು ಹೇಗೆ?
ವಂಚನೆ ದೂರು ದಾಖಲಿಸಿರುವ ಉದ್ಯಮಿ ಗೋವಿಂದ ಬಾಬು ಚೈತ್ರಾ ತಂಡಕ್ಕೆ 7 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಪೊಲಿಟಿಕಲ್ 360ಗೆ ದೊರೆತ ಮಾಹಿತಿ ಪ್ರಕಾರ, ಚೈತ್ರಾ ತಂಡಕ್ಕೆ ಗೋವಿಂದ ಬಾಬು ನೀಡಿದ್ದು 3 ಕೋಟಿ ರೂಪಾಯಿ ಮಾತ್ರ. ಈ ಹಣವನ್ನು ಗೋವಿಂದ ಬಾಬು ಅವರ ತಂಡ ಚೈತ್ರಾ ತಂಡಕ್ಕೆ ಬೈಂದೂರಿನಿಂದ ಪಡುಬಿದ್ರಿ ಬೀಚ್ ನಲ್ಲಿ ನೀಡಿದ್ದರು. ಪಕ್ಕಾ ಸಿನಿಮಾ ಶೈಲಿಯಲ್ಲಿ ಹಣ ವರ್ಗಾವಣೆ ಮಾಡಲಾಗಿದ್ದು, ಹರಿದ ನೋಟನ್ನು ಆರೋಪಿಗಳು ಕೋಡ್ ವರ್ಡ್ ಆಗಿ ಬಳಸಿಕೊಂಡಿದ್ದರು. ಹರಿದ ನೋಟಿನ ಒಂದು ತುಂಡು ಚೈತ್ರಾ ತಂಡದ ಜೊತೆ ಇದ್ದರೆ, ಮತ್ತೊಂದು ತುಂಡು ಗೋವಿಂದ ಬಾಬು ತಂಡದ ಬಳಿ ಇತ್ತು. ಎರಡು ಕಡೆಯವರು ನೋಟಿನ ತುಂಡುಗಳನ್ನು ಒಟ್ಟು ಸೇರಿಸಿ ಹಣ ಕೊಡುವ ಮೊದಲು ಖಚಿತಪಡಿಸಿಕೊಂಡಿದ್ದರು.
ಗೋವಿಂದ ಬಾಬು ತಂಡದವರು XUV 500 ಕಾರಿನಲ್ಲಿ ಹಣ ತಂದು ಚೈತ್ರಾ ತಂಡಕ್ಕೆ ಒಪ್ಪಿಸಿದ್ದರು. ಬರುವಾಗ ಕೇಸರಿ ಶಾಲು, ಹಣೆಗೆ ತಿಲಕ ಇಟ್ಟಿದ್ದರು. ಮೂರು ನೀಲಿ ಬಣ್ಣದ ಬ್ಯಾಗ್ ಗಳಲ್ಲಿ ತಲಾ 1 ಕೋಟಿ ರೂಪಾಯಿ ಹಣ ತಂದಿದ್ದರು. ಹಣದ ಕಟ್ಟಿನ ಮೇಲೆ ಪುಸ್ತಕಗಳನ್ನು ಜೋಡಿಸಲಾಗಿತ್ತು. ಹಣ ಪಡೆದ ಚೈತ್ರಾ ತಂಡ ಅದನ್ನು ಎರ್ಟಿಗಾ ಕಾರಿಗೆ ಶಿಫ್ಟ್ ಮಾಡಿ ಚಿಕ್ಕಮಗಳೂರು ಕಡೆ ತೆರಳಿತ್ತು ಎಂದು ತಿಳಿದು ಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.