ಬೆಂಗಳೂರು : ವಂಚನೆ ಪ್ರಕರಣದಲ್ಲಿ ಬಂಧಿತಳಾಗಿ ಸಿಸಿಬಿ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿಸಿಬಿ ಕಚೇರಿಯಲ್ಲೇ ಚೈತ್ರಾ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಸಿಸಿಬಿ ಅಧಿಕಾರಿಗಳು ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೈತ್ರಾ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಿಂದ ಇಂದು ಬೆಳಿಗ್ಗೆ ಸಿಸಿಬಿ ಪೊಲೀಸರು ಕಚೇರಿಗೆ ಕರೆ ತಂದಿದ್ದರು. ಕಚೇರಿ ತಲುಪಿದ ಐದು ನಿಮಿಷಕ್ಕೆ ತಲೆಸುತ್ತು ಎಂದ ಚೈತ್ರಾ ಕುಸಿದು ಬಿದ್ದಿದ್ದಾರೆ. ಕಚೇರಿಗೆ ಆಗಮಿಸುವ ಮುನ್ನ ಅವರು ಒಂದು ಗಂಟೆಗಳ ಕಾಲ ಯೋಗ ಮಾಡಿದ್ದರು ಎಂದು ತಿಳಿದು ಬಂದಿದೆ.
ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಂದ ಹಣ ಪಡೆದು ವಂಚಿಸಿದ ಆರೋಪ ಚೈತ್ರಾ ಮತ್ತು ಆಕೆಯ ತಂಡದ ಮೇಲಿದೆ. ಈ ಬಗ್ಗೆ ಗೋವಿಂದ ಬಾಬು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರಂಭದಲ್ಲಿ ಇಬ್ಬರು ಆರೋಪಿಗಳಾದ ಗಗನ್ ಕಡೂರು ಮತ್ತು ಪ್ರಸಾದ್ ಎಂಬುವವರನ್ನು ಬಂಧಿಸಿದ್ದರು.
ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಚೈತ್ರಾ ಮತ್ತು ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬವರನ್ನು ಸೆಪ್ಟೆಂಬರ್ 12ರಂದು ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಬೆಂಗಳೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಚೈತ್ರಾ ಸೇರಿದಂತೆ ಆರೋಪಿಗಳನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.