ಬೆಂಗಳೂರು : ನಾನು ವಕೀಲನಾಗಿ ಹೇಳೋದಾದ್ರೆ ಚಂದ್ರಬಾಬು ನಾಯ್ಡು ಬಂಧನದ ಬಗ್ಗೆ ಹಲವು ಸಂಶಯ ಬರುತ್ತಿದೆ, ಚುನಾವಣೆ ಹತ್ತಿರ ಬರುತಿದ್ದಂತೆ ಕೇಸ್ ದಾಖಲು ಮಾಡಿದ್ದಾರೆ ಎಂದು ಮಾಜಿ ಸಚಿವ ವಿ.ಎಸ್ ಉಗ್ರಪ್ಪ ಸಂಶಯ ವ್ಯಕ್ತಪಡಿಸಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ಅನಿಸುತ್ತಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಚಂದ್ರಬಾಬು ಅವರ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಜೊತೆಗೆ ಅವರ ಹಿಂಬಾಲಕರನ್ನು ಕೂಡ ಬಂಧಿಸಲಾಗಿದೆ ಎಂದು ದೂರಿದ್ದಾರೆ.
ಏನಿದು ಪ್ರಕರಣ?: 371 ಕೋಟಿ ರೂಪಾಯಿ ಹಗರಣ ಎಸಗಿದ ಗಂಭೀರ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಹಗರಣವು ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ (APSSDC) ಸಂಬಂಧಿಸಿದೆ.
ಇದನ್ನೂ ಓದಿ : ಗೃಹ ಸಚಿವರೇ ನೀವೂ ದಲಿತ ಸಮುದಾಯ; ದಬ್ಬಾಳಿಕೆ ಮಾಡುವ ಮಂತ್ರಿಗೆ ಏನು ಮಾಡ್ತೀರ?
ನಾಯ್ಡು ಮೇಲಿರುವ ಆರೋಪ ಏನು?
ಯುವಕರಿಗೆ ಉದ್ಯೋಗ ತರಬೇತಿ ನೀಡಲು ಅಂದಿನ ಮುಖ್ಯಮಂತ್ರಿ ನಾಯ್ಡು ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಈ ಸಂಬಂಧ ಟಿಡಿಪಿ ಸರ್ಕಾರವು ಜರ್ಮನ್ ಎಂಜಿನಿಯರಿಂಗ್ ದೈತ್ಯ ಸೀಮೆನ್ಸ್ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಸೀಮೆನ್ಸ್, ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಾಜ್ಯ ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯನ್ನು ಕಾರ್ಯಗತಗೊಳಿಸುವ ಉದ್ದೇಶವನ್ನು ಹೊಂದಿತ್ತು.
ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ʼಸಿಎಂ ಆಕಾಂಕ್ಷಿʼಗಳ ಷಡ್ಯಂತ್ರವೇ?: ಹರಿಪ್ರಸಾದ್ ನಡೆಗೆ ಯತ್ನಾಳ್ ಟಾಂಗ್
3,356 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಸರ್ಕಾರ 10% ಹಣವನ್ನು ಹೂಡಲಿದ್ದರೆ, ಸೀಮೆನ್ಸ್ 90% ಹಣವನ್ನು ಹೂಡಲು ಒಪ್ಪಿಕೊಂಡಿತ್ತು. ಸೀಮೆನ್ಸ್ ಈ ಯೋಜನೆಗೆ ಯಾವುದೇ ಹಣವನ್ನು ಹೂಡಿಕೆ ಮಾಡದಿದ್ದರೂ ಮೂರು ತಿಂಗಳ ಒಳಗಡೆ 371 ಕೋಟಿ ರೂ. ಹಣವನ್ನು ಐದು ಕಂತುಗಳಲ್ಲಿ ಪಾವತಿಸಲಾಗಿದೆ.
ಶೆಲ್ ಕಂಪನಿಗಳ ಮೂಲಕ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಹಣವನ್ನು ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಪಾವತಿಸಲಾಗಿದೆ. ಅಲೈಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನಾಲೆಡ್ಜ್ ಪೋಡಿಯಂ, ಕ್ಯಾಡೆನ್ಸ್ ಪಾರ್ಟ್‌ನರ್ಸ್ ಮತ್ತು ಇಟಿಎ ಗ್ರೀನ್ಸ್ ಸೇರಿದಂತೆ ವಿವಿಧ ಶೆಲ್ ಕಂಪನಿಗಳಿಗೆ ಕೌಶಲ್ಯ ಅಭಿವೃದ್ಧಿಗಾಗಿ 241 ಕೋಟಿ ಪಾವತಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಿಲ್ಲದೆ 371 ಕೋಟಿ ಬಿಡುಗಡೆ ಮಾಡಲಾಗಿದೆ. ಚಂದ್ರಬಾಬು ನಾಯ್ಡು ನಿರ್ದೇಶನದಂತೆ ಈ ಶೆಲ್ ಕಂಪನಿಗಳನ್ನು ಸ್ಥಾಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ನಾಯ್ಡು ಅವರನ್ನು ಬಂಧಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.