ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತ್ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆಸಿಆರ್ ಅವರು ಹೊಟ್ಟೆನೋವಿನ ಹಿನ್ನೆಲೆ ನಗರದ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಹೊಟ್ಟೆಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಟ್ಟೆಯಲ್ಲಿ ಕಂಡುಬಂದಿರುವ ಹುಣ್ಣಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಇದನ್ನು ಹೊರತುಪಡಿಸಿ ಆರೋಗ್ಯವಾಗಿದ್ದಾರೆ. ಅವರಿಗೆ ಸೂಕ್ತವಾದ ಔಷಧಿ ನೀಡಲಾಗುತ್ತಿದೆ ಎಂದಿದ್ದಾರೆ. ಕೆಸಿಆರ್ ಆಸ್ಪತ್ರೆ ದಾಖಲಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ತೆಲಂಗಾಣದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಕೆ ಚಂದ್ರಶೇಖರ್ ರಾವ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಸದ್ಯ ಸಿಎಂ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸಿಎಂ ಅವರ ಇತರ ಪರೀಕ್ಷಾ ಫಲಿತಾಂಶ ಸಹಜ ಸ್ಥಿತಿಗೆ ಬಂದಿದ್ದು, ಆತಂಕ ಪಡೋ ಅಗತ್ಯವಿಲ್ಲ, ಆಸ್ಪತ್ರೆಯಲ್ಲಿ ಅವರಿಗೆ ಸಿಟಿ ಸ್ಕ್ಯಾನ್ ಮತ್ತು ಎಂಡೋಸ್ಕೋಪಿ ಮಾಡಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.