Friday, September 29, 2023
spot_img
- Advertisement -spot_img

ಚಂದ್ರಯಾನ-3: ಮಾಜಿ ಪ್ರಧಾನಿ ಹೆಚ್‌ಡಿಡಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರಿಂದ ಶುಭ ಹಾರೈಕೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಬಹು ನಿರೀಕ್ಷಿತ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ್ ಮೇಲೆ ಸುರಕ್ಷಿತವಾಗಿ ಇಳಿಯಲು ಕ್ಷಣಗಣನೆ ಆರಂಭವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ಗಣ್ಯರು ಇಸ್ರೋಗೆ ಶುಭ ಕೋರಿದ್ದಾರೆ.

ಚಂದ್ರಯಾನ ಕುರಿತು ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ‘ಇಸ್ರೋ ಸಂಸ್ಥೆಯನ್ನು ನಾನು ನನ್ನ ಸಹ ಭಾರತೀಯರೊಂದಿಗೆ ಸೇರಿ ಅಭಿನಂದಿಸುತ್ತೇನೆ. ಇಸ್ರೋ ವಿಶ್ವ ದರ್ಜೆಯ ವೈಜ್ಞಾನಿಕ ಸಂಸ್ಥೆಯಾಗಿದ್ದು, ದಶಕಗಳಿಂದ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಅವರ ಅಮೋಘ ಸಾಧನೆಗಳು ನಮ್ಮನ್ನು ವಿಶ್ವದ ಅಗ್ರಸ್ಥಾನದಲ್ಲಿರಿಸಿದೆ. ದೇವರು ನಮ್ಮ ರಾಷ್ಟ್ರ ಮತ್ತು ನಮ್ಮ ವಿಜ್ಞಾನಿಗಳನ್ನು ಆಶೀರ್ವದಿಸಲಿ’ ಎಂದು ಚಂದ್ರಯಾನ-3ಕ್ಕೆ ಶುಭಕೋರಿದ್ದಾರೆ.

‘ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ದಶಕಗಳ ಪರಿಶ್ರಮ ಕೈಗೂಡಲಿ ಎಂದು ಹಾರೈಸುತ್ತೇನೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾನು ಕೂಡ ಉತ್ಸುಕನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಕೋಟ್ಯಾಂತರ ಭಾರತೀಯರ ಪ್ರಾರ್ಥನೆ, ಹಾರೈಕೆ ಎಲ್ಲವೂ ಇಸ್ರೋದ ಸಾಹಸಕ್ಕೆ ಸಹಕಾರಿಯಾಗಲಿ. ಚಂದ್ರನ ಅಂಗಳದಲ್ಲಿ ಇಳಿಯಲು ಸಜ್ಜಾದ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ’ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ.

‘ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾನು ಕಾತರನಾಗಿದ್ದು, ಭಾರತೀಯರ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿ. ಇದಕ್ಕಾಗಿ ಶ್ರಮ ವಹಿಸಿದ ವಿಜ್ಞಾನಿಗಳು, ಇಸ್ರೋ ಸಂಸ್ಥೆಗೆ ಶುಭ ಹಾರೈಸುತ್ತೇನೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಜ್ಞಾನಿಗಳಿಗೆ ಶುಭಕೋರಿದ್ದಾರೆ.

ಚಂದ್ರಯಾನ-3ಕ್ಕೆ ಶುಭಕೋರಿ ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ‘ವಿಜ್ಞಾನಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ; ಭಾರತಕ್ಕೆ ಯಶಸ್ಸು ಸಿಗುವ ಭರವಸೆ ಇದೆ. ಸೇಫ್ ಲ್ಯಾಂಡಿಂಗ್ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ’ ಎಂದು ಇಸ್ರೋ ವಿಜ್ಞಾನಿಗಳಿಗೆ ಅವರು ಶುಭಕೋರಿದರು.

ಇದನ್ನೂ ಓದಿ; ಚಂದ್ರಯಾನ-3: ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ; ಸೇಫ್ ಲ್ಯಾಂಡಿಂಗ್‌ಗಾಗಿ ಪ್ರಾರ್ಥನೆ

‘ವಿಶ್ವವೇ ಕಾತುರದಿಂದ ಕಾಯುತ್ತಿರುವ ‘ಚಂದ್ರಯಾನ-3’ರ ಚಂದ್ರಸ್ಪರ್ಶ ಭಾರತದ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭವಾಗಿದೆ. ನಮ್ಮ ವಿಜ್ಞಾನಿಗಳ ಅಪಾರ ಪರಿಶ್ರಮದಿಂದ, ಚಂದ್ರನ ಸನಿಹದಲ್ಲಿರುವ ಕಕ್ಷೆಯಲ್ಲಿ ವಿಕ್ರಮ್ ಖಂಡಿತಾ ಚಂದಿರನ ಮೇಲೆ ಅಡಿ ಇಡಲಿದ್ದಾನೆ. ಸಾಪ್ಟ್ ಲ್ಯಾಂಡಿಂಗ್ ಯಶಸ್ಸಿಯಾಗಲೆಂದು ಹಾರೈಸೋಣ’ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles