ಬೆಂಗಳೂರು: ಇಂದಿನ ವಿಧಾನಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರುಗಳು ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವರಾಜ್ ಶಿವಗಂಗಾ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರಿನ ಮೇಲೆ ಪ್ರಮಾಣವಚನ ಸ್ವೀರಿಸಿ ಎಲ್ಲರ ಗಮನಸೆಳೆದಿದ್ದಾರೆ.
ಬಸವರಾಜ್ ಶಿವಗಂಗಾ ಅವರ ಪ್ರಮಾಣವಚನ ಸ್ವೀಕಾರದ ವೇಳೆ ಭಗವಂತ ಹಾಗೂ ನನ್ನ ಆರಾಧ್ಯದೈವ ಡಿಕೆ ಶಿವಕುಮಾರ್ ಅವರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಸದನದಲ್ಲಿ ಆಕ್ಷೇಪ ಕೂಡಾ ವ್ಯಕ್ತವಾಯಿತು. ಕೂಡಲೇ ಮಧ್ಯೆ ಪ್ರವೇಶಿಸಿದ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಗೊಂದಲ ಬಗೆಹರಿಸಿದರು, ಅಲ್ಲದೇ ವ್ಯಕ್ತಿ ಹೆಸರಿನ ಮೇಲೆ ಪ್ರಮಾಣ ಮಾಡಿಸದಂತೆ ವಿಧಾನಸಭೆ ಕಾರ್ಯದರ್ಶಿಗೆ ಸೂಚನೆ ನೀಡಿದರು. ಸಂವಿಧಾನದ ಪ್ರಕಾರ ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ ದೇಶಪಾಂಡೆ ಅವರು ನೂತನ ಶಾಸಕರಿಗೆ ಖಡಕ್ ಸೂಚನೆ ನೀಡಿದರು. ದೇವರು ಅಥವಾ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಅದನ್ನ ಬಿಟ್ಟು ಬೇರೆ ಯಾವ ವ್ಯಕ್ತಿಯ ಹೆಸರಿನಲ್ಲೂ ಪ್ರಮಾಣವಚನ ಸ್ವೀಕರಿಸಬಾರದೆಂದು ಸಲಹೆ ನೀಡಿದರು. ಸದನ ಆರಂಭವಾಗುತ್ತಿದ್ದಂತೆ ಮೊದಲಿಗೆ ವರುಣಾ ಕ್ಷೇತ್ರದ ಶಾಸಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಎರಡನೇಯವರಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದ ಶಾಸಕರಾಗಿ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.