ಬೆಂಗಳೂರು: ನಾವು ಲಂಚ ಸ್ವೀಕರಿಸುವುದಿಲ್ಲ ಎಂಬ ಫಲಕವನ್ನು ನಿಮ್ಮ ಹಾಗೂ ನಿಮ್ಮ ಸಚಿವರ ಮನೆ, ಕಚೇರಿ ಮುಂದೆ ಹಾಕಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ
‘ನನಗೆ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂದು ಸರ್ಕಾರಿ ಕಚೇರಿಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೋರ್ಡ್ ಹಾಕಿಸುವ ಅಭಿಯಾನಕ್ಕೆ ಸಜ್ಜಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು,
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ಬೋರ್ಡ್ ಬರೆಸಿ ಹಾಕುವ ನಾಟಕಗಳನ್ನೆಲ್ಲ ನಿಲ್ಲಿಸಿ. ಮೊದಲು 40 ಪರ್ಸೆಂಟ್ ಕಮಿಷನ್ ಆರೋಪ ಸೇರಿದಂತೆ ಸಚಿವರುಗಳ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿ ಎಂದು ಆಗ್ರಹಿಸಿದ್ದಾರೆ.
ಸರ್ಕಾರಿ ಗುತ್ತಿಗೆದಾರರು ಲಂಚದ ಆರೋಪ ಮಾಡಿರುವುದು ಸಚಿವರ ಮೇಲೆ, ಅಧಿಕಾರಿಗಳ ಮೇಲೆ ಅಲ್ಲ. ಅಧಿಕಾರಿಗಳನ್ನು ತೋರಿಸಿ ಲಂಚ/ಕಮಿಷನ್ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಲಂಚಾವತಾರ ನಾಟಕದಲ್ಲಿ ಅಧಿಕಾರಿಗಳದ್ದು ಪೋಷಕ ಪಾತ್ರ. ರಾಜ್ಯ ಬಿಜೆಪಿ ಸರ್ಕಾರದ ಇಲಾಖಾ ಸಚಿವರದ್ದೇ ಮುಖ್ಯ ಪಾತ್ರ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಸರ್ಕಾರಿ ಕಚೇರಿಗಳಲ್ಲಿ “ಲಂಚ ಕೊಡಬೇಕಾಗಿಲ್ಲ” ಎಂಬ ಬೋರ್ಡ್ ಅಳವಡಿಸುವ ಮೊದಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ. ನೊಂದ ಜನರು ದೂರು ಕೊಟ್ಟರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.