ಚಿತ್ರದುರ್ಗ : ನಾಯಕ ಸಮಾಜದ ಮೀಸಲಾತಿ ಹೆಚ್ಚಿಸಿದ ಬಿಜೆಪಿ ವರಿಷ್ಠರ ಕ್ರಮಕ್ಕೆ ವಾಲ್ಮೀಕಿ ಸಮಾಜ ಕೃತಜ್ಞವಾಗಿದ್ದು, ನವೆಂಬರ್ 29ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಎಸ್‌ಎಸ್‌ಕೆಸ್ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯಿಂದ ಐದು ಲಕ್ಷ ಜನ ನಾಯಕ ಸಮಾಜದವರು ಬಳ್ಳಾರಿ ಸಮಾವೇಶಕ್ಕೆ ಆಗಮಿಸಿ ಬಿಜೆಪಿ ನಾಯಕರಿಗೆ ಕೃತಜ್ಞತೆ ವ್ಯಕ್ತಪಡಿಸಲಿದ್ದಾರೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ನಾಯಕ ಸಮಾಜದ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ, ಮೀಸಲಾತಿ ಹೆಚ್ಚಳಕ್ಕಾಗಿ ಅನೇಕ ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗಿದ್ದು, ಸಮಾಜದ ಪ್ರಸನ್ನಾನಂದಪುರಿ ಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ ಫಲವಾಗಿ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿದೆ ಎಂದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಬಿಜೆಪಿ ಎಂದರೆ ಕೇವಲ ಮುಂದುವರೆದ ಜನಾಂಗಕ್ಕೆ ಸೇರಿದ ಪಕ್ಷ ಎನ್ನುವ ಭಾವನೆಯಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಪ್ರತಿ ಮನೆ, ಹಳ್ಳಿಗಳಲ್ಲಿ ಬಿಜೆಪಿಯಿದೆ. ಕಳೆದ ನಲವತ್ತು ವರ್ಷಗಳಿಂದಲೂ ನಾಯಕ ಜನಾಂಗ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ಮಾಡಿಕೊಂಡು ಬಂದರೂ ಇಲ್ಲಿಯವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಈ ಸಮುದಾಯದವರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದ್ದನ್ನು ಬಿಟ್ಟರೆ ಯಾವ ಅನುಕೂಲ ಮಾಡಲಿಲ್ಲ. ನಾಗಮೋಹನ್‌ದಾಸ್ ಸಮಿತಿ ನೀಡಿದ ವರದಿ ಹಾಗೂ ಪ್ರಸನ್ನಾನಂದ ಸ್ವಾಮೀಜಿ ಪಟ್ಟುಬಿಡದೆ ನಡೆಸಿದ ಧರಣಿಗೆ ರಾಜ್ಯ ಸರ್ಕಾರ ಕೇಂದ್ರದ ಒಪ್ಪಿಗೆ ಪಡೆದು ಮೀಸಲಾತಿಯನ್ನು ಹೆಚ್ಚಿಸಿದೆ ಎಂದರು.