ಬೆಂಗಳೂರು : ದೇವರಾಜ ಅರಸು, ಇಂದಿರಾಗಾಂಧಿ, ಜವಾಹರಲಾಲ್ ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ. ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು, ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಕೆ ಹರಿಪ್ರಸಾದ್‌ಗೆ ತಿರುಗೇಟು ನೀಡಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ನನ್ನನ್ನು ಎರಡನೇ ದೇವರಾಜ ಅರಸು ಎಂದು ಕರೆಯುತ್ತಾರೆ, ಅದು ಸಾಧ್ಯವಿಲ್ಲ. ನಾನು ಅರಸು ಆಗುವುದಿಲ್ಲ ಎಂದರು.
ಇದನ್ನೂ ಓದಿ : ಸಂವಿಧಾನ-ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಜವಾಬ್ದಾರಿ: ಮಲ್ಲಿಕಾರ್ಜುನ ಖರ್ಗೆ
ನಾವು ಕೈಗೊಳ್ಳುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯದ ತತ್ವಗಳು ಇರುತ್ತವೆ. ಎಲ್ಲಾ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದು ಮುನ್ನಡೆದಾಗ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ ಹಾಗೂ ಸಮುದಾಯಗಳು ಅವಕಾಶಗಳನ್ನು ಗಿಟ್ಟಿಸಿಕೊಂಡು ಉಳಿದವುಗಳು ಅವಕಾಶದಿಂದ ವಂಚಿತರಾಗುತ್ತಿದ್ದರೆ, ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಈಗ ಒಂದು ಕೋಟಿ ರೂಪಾಯಿವರೆಗಿನ ಗುತ್ತಿಗೆ ಕೆಲಸಗಳಿಗೆ ಮೀಸಲಾತಿ ನೀಡಿದ್ದು ನಾವೇ ಎಂದು ನೆನಪಿಸಿ ಸಿದ್ದರಾಮಯ್ಯ ಅಧಿಕಾರ ಎಂಬುವುದು ನನಗೆ ಸಾಮಾಜಿಕ ನ್ಯಾಯವನ್ನು ಆಚರಿಸುವ ಹಾಗೂ ಪಾಲನೆ ಮಾಡುವ ಸಾಧನವಾಗಿದೆ ಎಂದು ತಿಳಿಸಿದರು. ಈ ಮುಖೇನ ಕಾಂಗ್ರೆಸ್ ಪ್ರತಿಯೊಂದು ಜಾತಿ, ಸಮುದಾಯಗಳಿಗೂ ಅವಕಾಶದ ಜೊತೆಗೆ ಅಧಿಕಾರವನ್ನು ನಿರಂತರವಾಗಿ ನೀಡುತ್ತಲೇ ಸಾಗಿದೆ. ಅಲ್ಲದೆ ಮೂಲಕ ಹಿಂದುಳಿದ ಸಮುದಾಯಗಳಿಗೆ, ದಲಿತ ಸಮುದಾಯಗಳಿಗೂ ಶಕ್ತಿ ತುಂಬುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : Special Session : ಸಂಸತ್ತಿನ ವಿಶೇಷ ಅಧಿವೇಶನ : ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ನಮ್ಮ ಸರ್ಕಾರವಿದ್ದಾಗ ಮುಂಚೆಯಿಂದಲೂ ವಿಶ್ವಕರ್ಮ ಸಮುದಾಯದ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುತ್ತ ಬಂದಿದ್ದೇವೆ. ಈಗ ಮತ್ತೆ ಅದೇ ರೀತಿಯ ಪ್ರಸ್ತಾವನೆ ಬಂದಿದೆ, ಈ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಈ ಕಾಳಜಿಯ ಭಾಷಣಗಳೆಲ್ಲ ಕೇವಲ ಚುನಾವಣೆಗಳ ಸಮಯದಲ್ಲಷ್ಟೇ ಹೆಚ್ಚಾಗಿ ಕೇಳಿಬರುತ್ತವೆ. ಪಕ್ಷಗಳಿಗೆ ಇರುವ ಸಾಮಾಜಿಕ ಕಳಕಳಿಯಯನ್ನು ಅರಿತುಕೊಳ್ಳಿ, ಯಾವ ಪಕ್ಷದವರಿಗೆ ಬದ್ದತೆ ಇದೆ ಎಂದು ಅರ್ಥಮಾಡಿಕೊಂಡು ನಿರ್ಧಾರ ಕೈಗೊಳ್ಳಿ. ಸಾಮಾಜಿಕ ನ್ಯಾಯವನ್ನು ಯಾರು, ಯಾವ ಪಕ್ಷದವರು ಅನುಸರಿಸುತ್ತಿದ್ದಾರೆ ಎಂಬುವುದನ್ನು ಪ್ರಾಮಾಣಿಕವಾಗಿ ಗ್ರಹಿಸಿ. ಬದ್ದತೆಯನ್ನು ಮರೆತ, ಕಾಳಜಿ ಹೊಂದಿರದವರ ಕೈಯಲ್ಲಿ ಅಧಿಕಾರ ನೀಡಿ ಸಾಮಾಜಿಕ ಬದಲಾವಣೆಯ ಜೊತೆಗೆ ಸಮಾಜಕ್ಕೆ ಒಳ್ಳೆಯದಾಗಬೇಕೆಂದು ತಲೆ ಚಚ್ಚಿಕೊಂಡರೆ ಅದು ಆಗದ ಮಾತು ಮಾರ್ಮಿಕವಾಗಿ ನುಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.