ಹುಬ್ಬಳ್ಳಿ : ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರಶಂಶಿಸಿ ಪತ್ರ ಬರೆದಿದ್ದ ಧಾರವಾಡ ಜಿಲ್ಲೆಯ ಬಾಲಕಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಭೇಟಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿ ಸ್ನೇಹಿ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರಿಗೆ ಪತ್ರ ಬರೆದು, ಧಾರವಾಡ ಜಿಲ್ಲೆಯ ಮಳಲಿ ಗ್ರಾಮದ ವಿದ್ಯಾರ್ಥಿನಿ ಆಶಾ ಪಾಟೀಲ್ ಕೈ ಕುಲುಕಿ ಸಿದ್ಧರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದಿಂದ 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗಿಗೆ ನೀಡುತ್ತಿದ್ದ, ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಕ್ಕಿ ವಿತರಣೆ ಯೋಜನೆಯನ್ನು 9 ಹಾಗೂ10 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಿರುವ ನಿರ್ಧಾರವನ್ನು ಶ್ಲಾಘಿಸಿ ಆಶಾ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ : Chandrababu Naidu Arrested : ಚಂದ್ರಬಾಬು ನಾಯ್ಡು ಅರೆಸ್ಟ್ : ಏನಿದು ₹ 371 ಕೋಟಿ ಹಗರಣ ಕೇಸ್?
ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆಶಾ ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡಿದ್ದಳು. ಆ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಸಿದ್ದರಾಮಯ್ಯ ಬಾಲಕಿಯನ್ನು ಶ್ಲಾಘಿಸಿದ್ದರು.


ಇಂದು ಧಾರವಾಡದಲ್ಲಿ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಿಮಿಸಿದ್ದ ಸಿಎಂ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿಯನ್ನು ಭೇಟಿಯಾಗಿ ಅವಳ ಸಮಾಜಮುಖಿ ಕಾಳಜಿಯನ್ನು ಅಭಿನಂದಿಸಿದ್ದಾರೆ.
ಬಾಲಕಿ ಸಿಎಂಗೆ ಹೇಳಿದ್ದೇನು..?
ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿ ಧಾರವಾಡ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಕೃತಜ್ಞತೆಗಳನ್ನು ತಿಳಿಸಿದ್ದಳು.
ಧಾರವಾಡದ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮಳಲಿಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸಿಎಂಗೆ ಪತ್ರ ಬರೆದು, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ನಿಮಗೆ ಅಭಿನಂದನೆಗಳು. ನೀವು ಜಾರಿಗೆ ತಂದಂತಹ ಯೋಜನೆಗಳು ರಾಜ್ಯಕ್ಕೆ ವರದಾನವಾಗಿವೆ. ಅದರಲ್ಲೂ ಕ್ಷೀರಭಾಗ್ಯ, ಶೂಭಾಗ್ಯ, ಮೊಟ್ಟೆ ವಿತರಣೆ ಕಾರ್ಯಕ್ರಮಗಳಿಂದ ನನಗೂ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಶ್ಲಾಘಿಸಿದ್ದಳು.
ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ: ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿನಿ ಬರೆದಿರುವ ಪತ್ರದಲ್ಲಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ತಾವು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಸಲಹೆ ನೀಡಿದ್ದಳು.
ನಿಮ್ಮನ್ನು ನೇರವಾಗಿ ನೋಡಬೇಕು: ವಿದ್ಯಾರ್ಥಿನಿಯು ಸಿದ್ದರಾಮಯ್ಯ ಅವರಲ್ಲಿ ಮತ್ತೊಂದು ಬೇಡಿಕೆ ಇಟ್ಟಿದ್ದು, ತಮ್ಮನ್ನು ಸ್ವತಃ ನೇರವಾಗಿ ನೋಡಬೇಕೆಂಬ ಅಭಿಲಾಷೆ ಇದ್ದು, ನಮ್ಮ ಭಾಗದ ಕಡೆ ಬಂದಾಗ ತಾವು ಅವಕಾಶ ನೀಡಿದರೆ ನನ್ನ ಸಹಪಾಠಿಗಳೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಳು.
ಇದನ್ನೂ ಓದಿ : ‘ಮುಖ್ಯಮಂತ್ರಿ ಆಗಿದ್ದಾಗ ಜಗದೀಶ್ ಶೆಟ್ಟರ್ ಯಾವ ಬಕೆಟ್ ಹಿಡಿದಿದ್ರು?’
ಇನ್ನು ಬಾಲಕಿಯ ಪತ್ರಕ್ಕೆ ಹರುಷ ವ್ಯಕ್ತಪಡಿಸಿರುದ್ದ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ನಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದರು. ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ ಎಂದಿದ್ದರು.
ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ ಎಂದಿದ್ದರು.
ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥಹ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.