ಚಿಕ್ಕಮಗಳೂರು : ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿದ್ದಕ್ಕೆ ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದ ಜನರು ದೇವರಿಗೆ ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆ.
ಕಳೆದ ವರ್ಷದ ಮಾವಿನಕಟ್ಟೆ ಗ್ರಾಮದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದ ಚೈತ್ರಾ, ಶಾಂತಿ ಸಾಮರಸ್ಯ ಕದಡುವ ಪ್ರಯತ್ನ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಗ್ರಾಮಸ್ಥರು, ಆನೆ ವಿಘ್ನೇಶ್ವರ ಸ್ವಾಮಿ, ಬ್ರಹ್ಮ ಜಟಿಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಶಾಂತಿ ಕದಡಲು ಪ್ರಯತ್ನಿಸಿದವರಿಗೆ ತಕ್ಕಪಾಠ ಕಲಿಸುವಂತೆ ದೇವರಲ್ಲಿ ಹರಕೆ ಹೊತ್ತಿದ್ದರು.


ಇದನ್ನೂ ಓದಿ : ಚೈತ್ರಾಗೆ ಹಣ ನೀಡಿದ್ದ ಉದ್ಯಮಿಗೂ ಸಿಸಿಬಿ ಸಂಕಷ್ಟ!
ವಂಚನೆ ಪ್ರಕರಣದಲ್ಲಿ ಚೈತ್ರಾ ಬಂಧನವಾಗುತ್ತಿದ್ದಂತೆ ಸಂತಸಗೊಂಡ ಗ್ರಾಮಸ್ಥರು, ‘ಈಗ ನಮ್ಮ ಗ್ರಾಮ ಶುದ್ಧವಾಯಿತು, ನಮ್ಮ ಹರಕೆ ಫಲಿಸಿತು’ ಎಂದು ಗ್ರಾಮದ ದೇವಾಲಯದಲ್ಲಿ ಈಡುಗಾಯಿ ಒಡೆದು, ವಿಶೇಷ ಪೂಜೆ ನೆರವೇರಿಸಿ ದೇವರಿಗೆ ತಮ್ಮ ಹರಕೆ ಸಲ್ಲಿಸಿದ್ದಾರೆ.


ಉದ್ಯಮಿ ಗೋವಿಂದ ಬಾಬುಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಂಧಿತರಾಗಿರುವ ಚೈತ್ರಾ ಕುಂದಾಪುರ ಪ್ರಸ್ತುತ ಸಿಸಿಬಿ ಕಸ್ಟಡಿಯಲ್ಲಿದ್ದಾರೆ. ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ನಿನ್ನೆ (ಸೆ.17) ಚೈತ್ರಾಗೆ ಸೇರಿದ ಕಾರು, ಹಣ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.