ಜೈಪುರ: ಗಡಿಯಲ್ಲಿ ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಚೀನಾ ನಮ್ಮ ದೇಶದ ಮೇಲೆ ದಾಳಿ ನಡೆಸಲು ಸಿದ್ಧವಾಗುತ್ತಿದೆ. ಚೀನಿ ಯೋಧರು ನಮ್ಮ ಯೋಧರಿಗೆ ಹೊಡೆಯುತ್ತಿದ್ದಾರೆ. ಇದರಿಂದ ಚೀನಾದ ಬೆದರಿಕೆ ನಮಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಸರ್ಕಾರ ಅದನ್ನು ನಿದ್ರಿಸುತ್ತಿದೆ ಎಂದರು.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಉಭಯ ದೇಶಗಳ ಸೈನಿಕರು ಕಾದಾಡಿದ ಬಳಿಕ ಈ ಬಗ್ಗೆ ಆತಂಕ ಮೂಡುತ್ತಿದೆ. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಅತಿಕ್ರಮಣಕ್ಕೆ ಅಲ್ಲ ಯುದ್ಧಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅವರ ಬಳಿ ಇರುವ ಅಸ್ತ್ರಗಳ ಮಾದರಿ ನೋಡಿ. ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.
ಆದರೆ ಇದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಸರ್ಕಾರ ಯದ್ಧ ಸನ್ನಿವೇಶವನ್ನು ಅಲ್ಲಗಳೆಯುತ್ತಿದೆ. ಇದನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.