ಚಿತ್ರದುರ್ಗ : ಇಂದು ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶ ನಡೆಯಲಿದ್ದು, ಎಸ್.ಜೆ.ಎಂ.ಕ್ರೀಡಾಂಗಣದಲ್ಲಿ ಐಕ್ಯತಾ ಸಮಾವೇಶಕ್ಕೆ ತಾಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿಯವರಿಗೂ ಆಹ್ವಾನ ನೀಡಿದ್ದು, ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸುಮಾರು 5 ಲಕ್ಷ ಜನರನ್ನು ಸೇರಿಸಿ ಮಧ್ಯ ಕರ್ನಾಟಕದಲ್ಲಿ ನಡೆಸುತ್ತಿರುವ ಈ ಸಮಾವೇಶದಲ್ಲಿ ಮುಂಬರುವ ಚುನಾವಣೆಗೆ ದಲಿತರ ಮತಗಳನ್ನು ಸೆಳೆಯುವ ಕಸರತ್ತು ನಡೆಯಲಿದೆ. ರಾಜ್ಯದ 24 ವಿಧಾನಸಭಾ ಕ್ಷೇತ್ರಗಳಿಂದಲೂ ಜನರನ್ನು ಕರೆಸಲು ಅನುಕೂಲವಾಗಲಿ ಎಂದು ಸಮಾವೇಶ ಆಯೋಜಿಸಲಾಗಿದೆ.
ಎಸ್ಸಿಯಲ್ಲಿ 101 ಹಾಗೂ ಎಸ್ಟಿಯಲ್ಲಿ 52 ಜಾತಿಗಳಿವೆ. ಈ ಜನಾಂಗದವರು ಒಟ್ಟುಗೂಡಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಕಾಂಗ್ರೆಸ್ ಈ ಸಮಾವೇಶ ಹಮ್ಮಿಕೊಂಡಿದೆ. ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ 62 ಆಕಾಂಕ್ಷಿಗಳು ತಲಾ ಒಬ್ಬರು 500 ಜನರನ್ನು ಸಮಾವೇಶಕ್ಕೆ ಕರೆದುಕೊಂಡು ಬರಬೇಕು ಎಂಬ ಗುರಿ ಸಹ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಇದು ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯದ ವಿವಿಧ ಭಾಗಗಳ ಕಾಂಗ್ರೆಸ್ ಮುಖಂಡರಿಗೂ ಜನರನ್ನ ಕರೆತರಲು ಗುರಿ ನೀಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಐಕ್ಯತಾ ಸಮಾವೇಶದಲ್ಲಿ ಐದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಮಾವೇಶದ ಉಸ್ತುವಾರಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದ್ದಾರೆ.
ಸಮಾವೇಶ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದು, ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಈ ಮೂವರಲ್ಲಿ ಯಾರಾದರೂ ಒಬ್ಬರು ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಎಸ್ಸಿ, ಎಸ್ಟಿ ಸಮುದಾಯದ ಸಮಸ್ಯೆ, ನ್ಯೂನತೆ ಸರಿಪಡಿಸಿ ನ್ಯಾಯಯುತ ಸೌಲಭ್ಯ ನೀಡಲು ಹತ್ತು ಅಂಶಗಳ ಕಾರ್ಯಕ್ರಮ ಸಮಾವೇಶದಲ್ಲಿ ಘೋಷಿಸಲಾಗುವುದು ಎಂದು ಹೇಳಲಾಗಿದೆ.