ಬೆಂಗಳೂರು: “ಕ್ರೈಸ್ತರು ಈ ಕ್ಷಣದಲ್ಲಿಯೂ ಜನರನ್ನು ಮತಾಂತರ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ ಸಚಿವ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ.
ಮುನಿರತ್ನ ಅವರು ಆರ್.ಆರ್.ನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ಕ್ರಿಶ್ಚಿಯನ್ನರ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಬಳಿಕ ಖಾಸಗಿ ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, “ಸ್ಲಂಗಳಲ್ಲಿ ಮತಾಂತರ ಚಟುವಟಿಕೆಗಳು” ನಡೆಯುತ್ತಿವೆ ಎಂದು ಆರೋಪಿಸಿದರು. “ಅಂತವರನ್ನು ಹೊಡೆದು ವಾಪಸ್ ಕಳುಹಿಸಬೇಕು” ಎಂದು ಜನರಿಗೆ ಕರೆ ನೀಡಿದರು. ಇದರಿಂದ ಯಾವುದೇ ಪರಿಣಾಮಗಳಾಗದಂತೆ ನೋಡಿಕೊಳ್ಳಿ ಎಂದು ಜನರಿಗೆ ಹೇಳಿದ್ದಾರೆ.
ಕೊಳೆಗೇರಿಗಳಲ್ಲಿ ಮತಾಂತರ ಗರಿಷ್ಠವಾಗಿದೆ. 1,400 ಜನರಿರುವ ಇಂತಹ ಸ್ಥಳಗಳಲ್ಲಿ 400 ಮಂದಿ ಮತಾಂತರಗೊಂಡಿದ್ದಾರೆ. ಕ್ರಿಶ್ಚಿಯನ್ನರು ಮತಾಂತರ ಮಾಡಲು ಬಂದರೆ ಅವರನ್ನು ಹೊರಹಾಕಿ ಇಲ್ಲವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಹೇಳಿದ್ದರು. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸರು ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.