ಬೆಳಗಾವಿ: ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ ಎಂಬ ಶಿವಸೇನೆ ಸಂಸದಮಹಾರಾಷ್ಟ್ರದ ರಾಜ್ಯಸಭಾ ಸಂಸದ, ಶಿವಸೇನೆಯ ಸಂಜಯ್ ರಾವುತ್ ರ ಹೇಳಿಕೆಗೆ ಸಿಎಂ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಈ ಹೇಳಿಕೆ ಅತ್ಯಂತ ಅಪ್ರಬುದ್ಧ ಹಾಗೂ ಅಸಂಬದ್ಧ. ಆ ರೀತಿ ನುಗ್ಗಲು, ಈ ಕಡೆ ಇರುವುದು ಭಾರತ ದೇಶ ಎಂಬುದು ಅವರಿಗೆ ಗೊತ್ತಿಲ್ಲ. ಹಾಗೆ ಮಾಡಿದಲ್ಲಿ, ಚೀನಾ ಆಕ್ರಮಣವನ್ನು ಭಾರತೀಯ ಸೈನಿಕರು ಹೇಗೆ ಹಿಮ್ಮೆಟ್ಟಿಸಿದರೋ ಅದೇ ರೀತಿ ಕನ್ನಡಿಗರು ಮಾಡುತ್ತಾರೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದ ನಾಯಕರ ಹೇಳಿಕೆಗೆ ಅವರ ಭಾಷೆಯಲ್ಲೇ ಉತ್ತರ ಕೊಡಬೇಕಿದೆ. ನಾನು ಸಹ ಈ ಬಗ್ಗೆ ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ.
ವಿಧಾನಸಭೆಯಲ್ಲಿ ಇದಕ್ಕೆ ಸುದೀರ್ಘ ಉತ್ತರ ನೀಡುತ್ತೇನೆ ಎಂದರು. ಗಡಿ ವಿವಾದ ಕುರಿತು ಮಹಾರಾಷ್ಟ್ರದ ಶಿವಸೇನೆ ಮತ್ತು ಎನ್‌ಸಿಪಿ ನಾಯಕರು ಅಸಂಬದ್ಧ ಹೇಳಿಕೆ ನೀಡುತ್ತಿದ್ದು, ಇದನ್ನು ಗಮನಿಸಿದರೆ ಅವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ಕಾಣುತ್ತದೆ. ಅನಗತ್ಯವಾಗಿ ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ, ಇದು ಸಾಧ್ಯವಾಗುವುದಿಲ್ಲ. ಈ ಹಿಂದೆಯೂ ಅವರು ಇಂಥ ರಾಜಕೀಯ ಮಾಡಲು ಹೋಗಿ ವಿಫಲರಾಗಿದ್ದರು. ಈಗಲೂ ಸಹ ವಿಫಲರಾಗುತ್ತಾರೆ ಎಂದರು.
‘ಚೀನಾದಂತೆ ನಾವು ಕರ್ನಾಟಕ ಪ್ರವೇಶಿಸಲಿದ್ದೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ, ನಾವು ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಹೇಳಿದ್ದರು.