ಬೆಂಗಳೂರು: ಎಸ್.ಎಂ.ಕೃಷ್ಣರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. S.M.ಕೃಷ್ಣ ಸಿಎಂ ಆಗಿದ್ದಾಗ ಹಲವು ಯೋಜನೆಗಳ ಜಾರಿ ಮಾಡಿದ್ದಾರೆ. ಎಸ್.ಎಂ.ಕೃಷ್ಣ ಸಾರ್ವಜನಿಕ ಬದುಕು ನಮಗೆಲ್ಲರಿಗೂ ಮಾದರಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ ಗೌರವ ಸಿಕ್ಕ ಹಿನ್ನೆಲೆ ಎಸ್.ಎಂ.ಕೃಷ್ಣ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕದ ಹೆಮ್ಮೆಯ, ನಾಡು ಕಂಡ ಅಪ್ರತಿಮ, ಸರಳ ಸಜ್ಜನಿಕೆಯ, ಸುರಾಜ್ಯ ಕೊಟ್ಟಿರುವ, ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾಗಿರುವ S.M.ಕೃಷ್ಣಗೆ ಪದ್ಮ ವಿಭೂಷಣ ಕೊಟ್ಟಿರೋದು ನಮಗೆಲ್ಲರಿಗೂ ಸಂತಸ, ಆನಂದ ತಂದಿದೆ ಎಂದು ಅಭಿಪ್ರಾಯಪಟ್ಟರು.
ಎಸ್ ಎಂ ಕೃಷ್ಣ ಮಾತನಾಡಿ, ನನ್ನ ಯೋಗ್ಯತೆಗೂ ಮೀರಿದ ದೊಡ್ಡ ಗೌರವ ಕೇಂದ್ರ ಸರ್ಕಾರದ ಪ್ರಧಾನಿಗಳು ಹಾಗೂ ಅಮಿತ್ ಶಾ ಅವ್ರು ನನಗಾಗಿ ಮಾಡಿಕೊಟ್ಟಿದ್ದಾರೆ. ಇದು ಬಯಸದೇ ಬಂದ ಭಾಗ್ಯವಾಗಿದೆ. ನಾನು ಇದನ್ನು ಕನಸ್ಸು ಮನಸ್ಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಪದ್ಮವಿಭೂಷಣ ಕೊಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ , ಹಾಗೂ ಸಿಎಂ ಸೇರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.