ಬೆಂಗಳೂರು: ರೇಣುಕಾಚಾರ್ಯ ತಮ್ಮನ ಪುತ್ರನ ಸಾವು ಪ್ರಕರಣ ಸಂಬಂಧ ಪೊಲೀಸ್ ತನಿಖೆಗೆ ರೇಣುಕಾಚಾರ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಿನ್ನೆಯೂ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ. ರೇಣುಕಾಚಾರ್ಯ ತಮ್ಮನ ಪುತ್ರನ ಸಾವು ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ನಿಮ್ಮ ಪ್ರಕಾರ ಏನೆಲ್ಲ ನಡೆದಿದೆ ಅಂತ ಮಾಹಿತಿ ಕೇಳಿದ್ದೇನೆ. ಇದರ ಬಗ್ಗೆ ಸೂಕ್ತವಾದ ನಿರ್ದೇಶನಗಳನ್ನು ಅಲ್ಲಿನ ಪೊಲೀಸರಿಗೆ ಮಾಹಿತಿ ಕಳುಹಿಸಿಕೊಡುತ್ತೇನೆ ಅಂತ ಹೇಳಿದ್ದೇನೆ.
ಪ್ರಕರಣ ಕುರಿತಂತೆ ತನಿಖೆ ಆಗಲಿ, ತನಿಖೆ ಬಳಿಕ ಸತ್ಯಾಂಶ ಹೊರಗೆ ಬರುತ್ತದೆ. ಎಲ್ಲ ಆಯಾಮಗಳಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಜನ ಸಂಕಲ್ಪ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾಳೆಯಿಂದ ಮೂರು ದಿನ ಉಡುಪಿ, ಗದಗ್, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಜನ ಸಂಕಲ್ಪ ಯಾತ್ರೆ ಇರುತ್ತದೆ. ಮೂರು ದಿನ ನಿರಂತರ ಕಾರ್ಯಕ್ರಮಗಳಿರುತ್ತವೆ. ಜನ ಸಂಕಲ್ಪ ಯಾತ್ರೆ ಡಿಸೆಂಬರ್ ವರೆಗೆ ನಡೆಯಲಿದೆ.
ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಎಸ್‍ಟಿ ಸಮಾವೇಶ ನಡೆಯಲಿದೆ. ನವೆಂಬರ್ 30 ರಂದು ಮೈಸೂರಿನಲ್ಲಿ ಎಸ್‍ಸಿ ಸಮಾವೇಶ ದೊಡ್ಡದಾಗಿ ಮಾಡುತ್ತೇವೆ ಎಂದಿದ್ದಾರೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಲಿದ್ದು, ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ತದ ನಂತರ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.