ಕೊಪ್ಪಳ : ಬಿಎಸ್ ಯಡಿಯೂರಪ್ಪರವರ ಪರಿಶ್ರಮ ಪಕ್ಷ ಯಾವತ್ತೂ ಮರೆಯುವುದಿಲ್ಲ. ರಾಜ್ಯದಲ್ಲಿ ಹಳ್ಳಿ, ಹಳ್ಳಿಗಳಿಗೆ ತೆರಳಿ ಅವರು ಪಕ್ಷ ಕಟ್ಟಿದ್ದಾರೆ. ಅವರ ಆಶೀರ್ವಾದದಿಂದ ಇಂದು ಬಿಜೆಪಿ ರಾಜ್ಯದಲ್ಲಿ ಈ ಮಟ್ಟಕ್ಕೆ ಬೃಹತ್ತಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಶ್ರೀರಕ್ಷೆ ಇದೆ. ರಾಜ್ಯದಲ್ಲಿ ಪಕ್ಷ ಈ ಮಟ್ಟದಲ್ಲಿ ಬೆಳೆಯಲು ಯಡಿಯೂರಪ್ಪ ಅವರೇ ಕಾರಣ ಎಂದರು. 2023ರ ಚುನಾವಣೆಯಲ್ಲಿ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ನಾಯಕತ್ವದಲ್ಲಿ ಹೊಸ ಯುಗ ಆರಂಭವಾಗಲಿದೆ. ಗುಜರಾತ್‌ನಂತೆ ರಾಜ್ಯದಲ್ಲೂ ಕಾಂಗ್ರೆಸ್ ಧೂಳೀಪಟವಾಗಲಿದೆ.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.ಪ್ರಧಾನಿ ಮೋದಿ ಅವರು ಬಿಜೆಪಿ ಮೇಲಿನ ದೃಷ್ಟಿಕೋನ ಬದಲಾಯಿಸಿದ್ದಾರೆ. ಗುಜರಾತ್‌ನಲ್ಲಿ ಏಳನೇ ಬಾರಿ ಜಯಭೇರಿ ಬಾರಿಸಿದ್ದೇವೆ. ರಾಜ್ಯದಲ್ಲೂ 2023ಕ್ಕೆ ಮತ್ತೆ ಕಮಲ ಅರಳಲಿದೆ ಎಂದರು.ಕರ್ನಾಟಕದಲ್ಲಿ ಯಡಿಯೂರಪ್ಪನವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವು ಜನಪರ ಆಡಳಿತ ನೀಡುತ್ತಿದ್ದೇವೆ. ಜನರು ಬಿಜೆಪಿಯನ್ನು ಯಾವತ್ತೂ ನಕಾರಾತ್ಮಕ ದೃಷ್ಟಿಕೋನದಿಂದ ನೋಡಿಲ್ಲ ಎಂದರು.