ಬೆಳಗಾವಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಹೆಸರಿನ ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ, ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ ಅವರ ಮನವೊಲಿಕೆಗೆ ರೆಡ್ಡಿ ಮನವೊಲಿಕೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
‘ಮೊದಲು ನೀವು ಜನಾರ್ದನರೆಡ್ಡಿ ಅವರೊಂದಿಗೆ ಮಾತನಾಡಿ. ಯಾವುದೇ ದುಡುಕಿನ ನಿರ್ಧಾರ ಬೇಡ ಎಂದು ತಿಳಿಸಿ’ ಎಂದು ಸಿಎಂ ಬೊಮ್ಮಾಯಿ ಸೋಮಶೇಖರ ರೆಡ್ಡಿಯವರಿಗೆ ಸೂಚಿಸಿದ್ದರು. ಅದರಂತೆ ಜನಾರ್ದನರೆಡ್ಡಿಗೆ ಕರೆ ಮಾಡಿ ಮಾತುಕತೆ ನಡೆಸಿ, ಮುಖ್ಯಮಂತ್ರಿಯ ಸಂದೇಶವನ್ನು ರವಾನಿಸಿದ್ದರು ಎಂದು ಮೂಲಗಳು ಹೇಳಿವೆ.
‘ದೆಹಲಿಗೆ ಹೋಗಿ ನಾನೇ ನಡ್ಡಾ ಹಾಗೂ ಅಮಿತ್ ಶಾ ಜೊತೆ ಮಾತುಕತೆ ನಡೆಸುತ್ತೇನೆ. ನಿಮ್ಮ ಸೋದರ ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಆದರೂ ಸ್ವಲ್ಪ ನಿಧಾನವಾಗಿ ಮುನ್ನಡೆಯಲು ಹೇಳಿ. ದೆಹಲಿಯಿಂದ ಬಂದ ಮೇಲೆ ಜನಾರ್ದನ ರೆಡ್ಡಿ ಜೊತೆ ಮಾತುಕತೆ ನಡೆಸುತ್ತೇನೆ. ಅಲ್ಲಿಯವರೆಗೆ ಅವರಿಗೆ ಸುಮ್ಮನಿರಲು ಹೇಳಿ. ಮುಂದೆ ಎಲ್ಲವನ್ನ ನಾವು ಸರಿ ಮಾಡೋಣ’ ಎಂದು ಬೊಮ್ಮಾಯಿ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.